ADVERTISEMENT

‌32 ವರ್ಷಗಳ ಸೇವೆಗೆ ಸಿಕ್ಕಿದ ಗರಿಮೆ- ಅಮೃತ ಮಹೋತ್ಸವದ ರಾಜ್ಯ ಪ್ರಶಸ್ತಿ

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಜ್ಯ ಪ್ರಶಸ್ತಿ

ಬಾಲಕೃಷ್ಣ ಪಿ.ಎಚ್‌
Published 1 ನವೆಂಬರ್ 2021, 5:09 IST
Last Updated 1 ನವೆಂಬರ್ 2021, 5:09 IST
ಬಾಲಕನನ್ನು ಪರೀಕ್ಷೆ ನಡೆಸುತ್ತಿರುವ ಡಾ. ಸುರೇಶ್‌ ಹನಗವಾಡಿ
ಬಾಲಕನನ್ನು ಪರೀಕ್ಷೆ ನಡೆಸುತ್ತಿರುವ ಡಾ. ಸುರೇಶ್‌ ಹನಗವಾಡಿ   

ದಾವಣಗೆರೆ: ರಾಜ್ಯದ ಮೊದಲ ಹಿಮೋಫಿಲಿಯ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಇಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.

1989–90ರಲ್ಲಿ ಈ ಸಂಸ್ಥೆಯನ್ನು ಡಾ. ಸುರೇಶ್‌ ಹನಗವಾಡಿ ಆರಂಭಿಸಿದ್ದರು. ಇದೀಗ ಪ್ರಶಸ್ತಿ ಬಂದಿರುವುದರಿಂದ ಕುಸುಮರೋಗ ಎಂದು ಕನ್ನಡದಲ್ಲಿ ಕರೆಯಲಾಗುತ್ತಿರುವ ಹಿಮೋಫಿಲಿಯಾ ಬಗ್ಗೆ ಜಾಗೃತಿ ಮೂಡಿಸಲು ಇನ್ನಷ್ಟು ಪ್ರಚಾರ ಸಿಕ್ಕಿದಂತಾಗುತ್ತದೆ ಎಂದು ಡಾ. ಸುರೇಶ್‌ ‘ಪ್ರಜಾವಾಣಿ’ ಜತೆ ಸಂತಸ ವ್ಯಕ್ತಪಡಿಸಿದರು.

‘ಹಿಮೋಫೀಲಿಯಾ ಬಗ್ಗೆ ಅರಿವೇ ಇಲ್ಲದ ಸಮಸ್ಯಲ್ಲಿ ವೈದ್ಯಕೀಯ ಚಿಕಿತ್ಸೆ ಸರಿಯಾಗಿ ದೊರಕದ ಕಾಲದಲ್ಲಿ ನಾನು ಸೊಸೈಟಿ ಆರಂಭಿಸಿದೆ. ಚಿಕ್ಕವನಿರುವಾಗ ನನ್ನ ಮಾವ ನೀಲಕಂಠಪ್ಪ ನನಗೆ ವೈದ್ಯನಾಗಬೇಕು ಎಂದು ಹೇಳುತ್ತಿದ್ದರು. ಅವರು ಹಿಮೋಫಿಲಿಯಾದಿಂದ ಬಳಲುತ್ತಿದ್ದರು. ಒಂದು ಬೇಸಿಗೆಯಲ್ಲಿ ಅವರು ದಾವಣಗೆರೆಗೆ ಬಂದಾಗ ಬ್ರೈನ್‌ ಹ್ಯಾಮರೇಜ್‌ ಆಗಿ, ಸರಿಯಾದ ಚಿಕಿತ್ಸೆ ದೊರೆಯದೇ ಮೃತಪಟ್ಟರು. ನಾನೂ ಹಿಮೋಫಿಲಿಯಾ ರೋಗಿ. ಹಾಗಾಗಿ ಅದಕ್ಕೆ ಸಂಬಂಧಿಸಿಯೇ ವೈದ್ಯನಾಗಬೇಕು. ಒಂದೇ ಕಡೆ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ಗುರಿ ಇಟ್ಟುಕೊಂಡೆ’ ಎಂದು ಡಾ. ಸುರೇಶ್‌ ವಿವರಿಸಿದರು.

ADVERTISEMENT

‘ಕ್ಯಾನ್ಸರ್‌, ಏಡ್ಸ್‌ಗಳಂಥ ಮಾರಕ ರೋಗಗಳ ಬಗ್ಗೆ ಜನರಿಗೆ ಗೊತ್ತಿದೆ. ಆದರೆ ಹಿಮೋಫಿಲಿಯಾ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದಕ್ಕಾಗಿ ಕೆಲಸ ಮಾಡಬೇಕು ಎಂದು ಸೊಸೈಟಿ ತೆರೆಯಲು ನಿರ್ಧರಿಸಿದೆ. ಸೊಸೈಟಿಯ ಬೆಳವಣಿಗೆಯಲ್ಲಿ ಹಲವು ಮಂದಿ ಕೆಲಸ ಮಾಡಿದ್ದಾರೆ. ಇಬ್ಬರನ್ನು ನೆನಪಿಸಿಕೊಳ್ಳಲೇಬೇಕು. ಒಬ್ಬರು ಕಿರುವಾಡಿ ಗಿರಿಜಮ್ಮ ಅವರು. ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಕಟ್ಟಿ ಸೊಸೈಟಿಗೆ ನಿವೇಶನ ಸಿಗುವಂತೆ ಮಾಡಿದವರು ಅವರು. ಇನ್ನೊಬ್ಬರು ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು. 1999ರಲ್ಲಿ ಮೊದಲ ಬಾರಿಗೆ ಹಿಮೋಫೀಲಿಯಾದ ನಿಧಿ ಸಂಗ್ರಹಕ್ಕಾಗಿ ಅವರು ಹಾಡಿದ್ದರು. ಇನ್ನು ಮುಂದೆ ನನ್ನ ಕಂಠ ಇರುವವರೆಗೆ ಪ್ರತಿ ವರ್ಷ ಹಿಮೋಫಿಲಿಯಾ ರೋಗಿಗಳಿಗಾಗಿ ಹಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಸತತ ಎರಡು ದಶಕಗಳ ಕಾಲ ಅವರು ವರ್ಷಕ್ಕೊಮ್ಮೆ ಈ ರೋಗಿಗಳಿಗಾಗಿ ಹಾಡುತ್ತಿದ್ದರು. ಅದರಿಂದ ಸಂಗ್ರಹವಾದ ಹಣವನ್ನು ಸೊಸೈಟಿಗೆ ನೀಡುತ್ತಿದ್ದರು. ಅದಕ್ಕಾಗಿ ಅವರನ್ನು ಸೊಸೈಟಿಯ ಮಹಾಪೋಷಕ ಎಂದು ಗುರುತಿಸಿದ್ದೆವು’ ಎಂದು ನೆನಪಿಸಿಕೊಂಡರು.

‘ನಾನು ಪೆಥಾಲಜಿ ಪ್ರಾಧ್ಯಾಪಕನಾಗಿದ್ದೇನೆ. ಉಳಿದ ಸಮಯವನ್ನು ಸೊಸೈಟಿಗೆ ಮೀಸಲಿಟ್ಟಿದ್ದೇನೆ. ಪತ್ನಿ ಡಾ. ಮೀರಾ ಹನಗವಾಡಿ ಸೊಸೈಟಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹಲವು ವೈದ್ಯರು ಕೆಲಸ ಮಾಡುತ್ತಿದ್ದಾರೆ. 800ಕ್ಕೂ ಅಧಿಕ ಹಿಮೋಫಿಲಿಯಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಮೋಫಿಲಿಯಾದಿಂದ ಬಳಲುತ್ತಿದ್ದ ನವೀನ್‌ ಹಾವಳಿ ಎನ್ನುವ ಯುವಕನನ್ನೇ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮಾಡಲಾಗಿದೆ. ನವೀನ್‌ ಸಂಸ್ಥೆಯ ಉಸ್ತುವಾರಿ ಹೊತ್ತಿದ್ದಾರೆ’ ಎಂದು ವಿವರಿಸಿದರು.

‘ಈ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ. ಹಿಮೋಫಿಲಿಯಾ ಮಾತ್ರವಲ್ಲ ರಕ್ತಕ್ಕೆ ಸಂಬಂಧಿಸಿದ ಎಲ್ಲ ವಿರಳ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗುವಂತಾಗಬೇಕು. ಪುನರ್ವಸತಿ ಸಿಗುವಂತಾಗಬೇಕು. ಆ ಮಟ್ಟಿಗೆ ಸಂಸ್ಥೆಯನ್ನು ಬೆಳೆಸಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಹಿಮೋಫಿಲಿಯಾ ಬಂದ ಕೂಡಲೇ ಅಂಗವಿಕಲರಾಗುವುದಿಲ್ಲ. ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಿದರೆ ಅಂಗವೈಕಲ್ಯದ ಅಪಾಯದಿಂದ ಪಾರಾಗಬಹುದು. ಅದಕ್ಕಾಗಿ ಬೇಗ ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸುವ ಗುರಿ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.