ADVERTISEMENT

45ಕ್ಕೆ ಹೆಚ್ಚಿದ ದಾವಣಗೆರೆ ವಾರ್ಡ್‌ಗಳ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:22 IST
Last Updated 27 ಅಕ್ಟೋಬರ್ 2017, 6:22 IST

ದಾವಣಗೆರೆ: ಅಭಿವೃದ್ಧಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳನ್ನು ಜನಸಂಖ್ಯೆಗೆ ಅನುಗುಣವಾಗಿ ವಿಭಜಿಸಲಾಗಿದೆ. ಹೀಗಾಗಿ ನಗರದ ವಾರ್ಡ್‌ಗಳ ಸಂಖ್ಯೆ ಈಗ 41ರಿಂದ 45ಕ್ಕೆ ಏರಿದೆ. 2011ರ ಜನಗಣತಿಯನ್ನು ಗಣನೆಗೆ ತೆಗೆದುಕೊಂಡು ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದ್ದು, 4 ಹಾಗೂ 8ನೇ ವಾರ್ಡ್‌ಗಳನ್ನು ತಲಾ ಎರಡೆರಡು ವಾರ್ಡ್‌ಗಳನ್ನಾಗಿ ಮಾಡಲಾಗಿದೆ. ಹಾಗೆಯೇ 36 ಮತ್ತು 37ನೇ ವಾರ್ಡ್‌ಗಳನ್ನು ಒಟ್ಟುಗೂಡಿಸಿ, ಮೂರು ವಾರ್ಡ್‌ಗಳನ್ನಾಗಿ ವಿಭಜಿಸಲಾಗಿದೆ. ಇನ್ನು 40 ಹಾಗೂ 41ನೇ ವಾರ್ಡ್‌ಗಳನ್ನೂ ಮೂರು ವಾರ್ಡ್‌ಗಳನ್ನಾಗಿ ಮಾರ್ಪಡಿಸಲಾಗಿದೆ.

ಈ ಮೊದಲು 4ನೇ ವಾರ್ಡ್‌ನಲ್ಲಿ 23,298 ಜನಸಂಖ್ಯೆಯಿತ್ತು. ವಿಭಜನೆಯ ನಂತರ 12,809 ಹಾಗೂ 10,489 ಜನಸಂಖ್ಯೆಯುಳ್ಳ ಎರಡು ವಾರ್ಡ್‌ಗಳು ರಚನೆಯಾಗಿವೆ. 8ನೇ ವಾರ್ಡ್‌ನಲ್ಲಿ ವಿಭಜನೆಗೂ ಮುನ್ನ 23,734 ಜನರಿದ್ದರು. ಈಗ 12,744 ಮತ್ತು 10,990 ಜನರು ಎರಡು ವಾರ್ಡ್‌ಗಳಲ್ಲಿ ಹಂಚಿಕೆಯಾಗಿದ್ದಾರೆ.

36ನೇ ವಾರ್ಡ್‌ನಲ್ಲಿ 17,092 ಮತ್ತು ವಾರ್ಡ್ 37ರಲ್ಲಿ 16,807 ಜನಸಂಖ್ಯೆಯಿತ್ತು. ಈ ಎರಡನ್ನೂ ಒಟ್ಟುಗೂಡಿಸಿ ಕ್ರಮವಾಗಿ 12,245 ಮತ್ತು 11,355 ಹಾಗೂ 10,299 ಜನಸಂಖ್ಯೆಯುಳ್ಳ ಮೂರು ವಾರ್ಡ್‌ಗಳನ್ನು ರಚಿಸಲಾಗಿದೆ. ವಾರ್ಡ್‌ 40ರಲ್ಲಿ 9,731 ಮತ್ತು ವಾರ್ಡ್‌ 41ರಲ್ಲಿ 13,347 ಜನರಿದ್ದು, ಇವನ್ನೂ ವಿಭಜಿಸಿದ್ದರಿಂದ ಮೂರು ವಾರ್ಡ್‌ಗಳಿಗೆ ಕ್ರಮವಾಗಿ 7,890 ಮತ್ತು 7,895 ಹಾಗೂ 7,893 ಜನಸಂಖ್ಯೆ ಹಂಚಿಕೆಯಾಗಿದೆ.

ADVERTISEMENT

ಹೆಚ್ಚು ಜನಸಂಖ್ಯೆಯಿರುವ ವಾರ್ಡ್‌ಗಳನ್ನು ವಿಭಜಿಸಿರುವುದರಿಂದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ಪಾಲಿಕೆ ವ್ಯಾಪ್ತಿಗೆ ಈ ಬಾರಿ ಯಾವುದೇ ಹೊಸ ಸ್ಥಳಗಳನ್ನು ಸೇರ್ಪಡೆ ಮಾಡಿಲ್ಲ. ಈ ಹಿಂದೆ ವಾರ್ಡ್‌ಗಳ ಪುನರ್‌ ರಚನೆ ಮಾಡಿದಾಗಲೇ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗಗಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿತ್ತು ಎಂದು ಮಾಹಿತಿ ನೀಡುತ್ತಾರೆ ಪಾಲಿಕೆ ಅಧಿಕಾರಿಗಳು.

ವಾರ್ಡ್‌ ವಿಂಗಡನೆ ಬಗ್ಗೆ ಆಕ್ಷೇಪಣೆಗಳಿದ್ದರೆ ಕಾಲಮಿತಿಯೊಳಗೆ ಸಲ್ಲಿಸುವಂತೆ ನಾಗರಿಕರಿಗೆ ತಿಳಿಸಲಾಗಿತ್ತು. ಆದರೆ, ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು ಬಂದಿಲ್ಲ. ಹೀಗಾಗಿ, ಈಗ ಮಾಡಿರುವ ವಾರ್ಡ್‌ ವಿಂಗಡಣೆ ಪ್ರಕ್ರಿಯೆ ಅಂತಿಮಗೊಳ್ಳಬಹುದು ಎನ್ನುತ್ತಾರೆ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ರವೀಂದ್ರ ಮಲ್ಲಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.