ADVERTISEMENT

‘ಅಯ್ಯಪ್ಪ ದೇಗುಲ: ಮಹಿಳೆಯರ ಪ್ರವೇಶ ನಿಷೇಧ ಸರಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 9:13 IST
Last Updated 7 ಜನವರಿ 2018, 9:13 IST

ಹರಪನಹಳ್ಳಿ: ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸುವುದು ಸರಿಯಾಗಿದೆ ಎಂದು ಚಲನಚಿತ್ರ ಹಿರಿಯ ನಟ, ಶಬರಿಮಲೈ ಅಯ್ಯ‍ಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಎಸ್.ಶಿವರಾಮ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘10 ವರ್ಷದೊಳಗಿನ ಹಾಗೂ 50 ವರ್ಷ ದಾಟಿದ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ಸೂಕ್ತ. ಅಯ್ಯಪ್ಪ ದೇವಸ್ಥಾನದ 18 ಮೆಟ್ಟಿಲು ಏರಲು 41 ದಿನಗಳ ಕಾಲ ಕಟ್ಟುನಿಟ್ಟಿನ ವ್ರತ ಮಾಡಬೇಕು. ಆದರೆ ಮಹಿಳೆಯರಿಗೆ ಇದು 30 ದಿನಗಳವರೆಗೆ ಮಾತ್ರ ಸಾಧ್ಯ.

ಕೆಲವು ವಿಷಯಗಳನ್ನು ಬಹಿರಂಗವಾಗಿ ಹೇಳದೇ ಸಂದಿಗ್ಧ ಪರಿಸ್ಥಿತಿ ತಂದಿಡುತ್ತಾರೆ. ಹಾಗಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಪಾಲಿಸಬೇಕು’ ಎಂದರು.

ADVERTISEMENT

‘ಮಕರ ಸಂಕ್ರಮಣದಂದು ಉತ್ತರ ನಕ್ಷತ್ರ ಬರುತ್ತದೆ. ಆದರೆ ಅಂದು ಬೆಳಗುವ ಜ್ಯೋತಿ ಮಾತ್ರ ಕರ್ಪೂರದಿಂದ ಹಚ್ಚಲಾಗುತ್ತಿದೆ. ಮದುವೆಯಾದ ನೂತನ ದಂಪತಿಗೆ ಮಧ್ಯಾಹ್ನ ಅರುಂಧತಿ ನಕ್ಷತ್ರ ತೋರಿಸತ್ತಾರಲ್ಲ ಇದು ಹಾಗೆ?. ಇದೊಂದು ನಂಬಿಕೆಯಾಗಿದ್ದು, ಸಾಂಕೇತಿಕವಾಗಿ ನೋಡಬೇಕು ಅಷ್ಟೇ. ಹಿಂದೂಗಳನ್ನು ಇಟ್ಟುಕೊಂಡು ರಾಜಕಾರಣಿಗಳು ಆಟವಾಡುತ್ತಿದ್ದಾರೆ. ಅನ್ಯ ಧರ್ಮಗಳ ಬಗ್ಗೆಯೂ ಮಾತನಾಡಲಿ ನೋಡೋಣ. ಮುಸ್ಲಿಂ, ಕ್ರೈಸ್ತ ಧರ್ಮಗಳಲ್ಲಿರುವ ಅಜ್ಞಾನಗಳ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ನಾನು ಇದುವರೆಗೂ ಎಂದೂ ಡೋಲಿಯಲ್ಲಿ ಕುಳಿತುಕೊಂಡು ಹೋಗಿ ಅಯ್ಯಪ್ಪ ದರ್ಶನ ಪಡೆದುಕೊಂಡಿಲ್ಲ. ಯಾವ ವರ್ಷ ಡೋಲಿಯಲ್ಲಿ ಬರುವ ಹಾಗೆ ಆಗುತ್ತದೆಯೋ ಅದೇ ನನ್ನ ಕೊನೆಯ ವರ್ಷ. ನನ್ನನ್ನು ನಾಲ್ಕು ಜನ ಹೊರುವುದು ಜೀವನದಲ್ಲಿ ಒಂದೇ ಸಲ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.