ADVERTISEMENT

‘ರಾಜಕೀಯದಲ್ಲಿ ಧ್ರುವೀಕರಣ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 8:44 IST
Last Updated 9 ಜನವರಿ 2018, 8:44 IST

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಫೆಬ್ರುವರಿ ನಂತರ ಹೊಸ ರಾಜಕೀಯ ಧ್ರುವೀಕರಣ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಪಕ್ಷದ ಜಿಲ್ಲಾ ವೀಕ್ಷಕ ರಮೇಶ್‌ಬಾಬು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದಿಂದ ಹೊರ ಹೋಗುವುದು ಅವರ ವೈಯಕ್ತಿಕ ವಿಚಾರ. ಆದರೆ. ಫೆಬ್ರುವರಿ ನಂತರ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸುಮಾರು 12 ಜನ ಶಾಸಕರು ಜೆಡಿಎಸ್‌ ಸೇರಲಿದ್ದಾರೆ’ ಎಂದರು.

‘ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಗಮನ ಹರಿಸಲು 12 ಜನ ವಿಧಾನಪರಿಷತ್ ಸದಸ್ಯರನ್ನು ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ. ನನ್ನನ್ನು ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ ಅವರಿಗೆ ಹಾವೇರಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಹೈಕಮಾಂಡ್‌ ತಂತ್ರಗಾರಿಕೆ ರೂಪಿಸಿದೆ ಎಂದರು. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯ ಜನಪರ ಅಂಶಗಳು ಬರುವ ಚುನಾವಣೆಗೆ ಜಿಲ್ಲೆಯಲ್ಲೂ ಪೂರಕವಾಗಲಿವೆ ಎಂದರು.

ವಿಧಾನಪರಿಷತ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡರಾದ ಗಣೇಶ ದಾಸಕರಿಯಪ್ಪ, ಜೆ.ಅಮಾನುಲ್ಲಾ ಖಾನ್, ಗೋಣಿವಾಡ ಮಂಜುನಾಥ್, ಶೀಲಾ ಕುಮಾರ್, ಕೆ.ಎ.ಪಾಪಣ್ಣ, ದಾದಾಪೀರ್, ಅಶೋಕ್, ಖಾದರ್ ಪಾಷ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ದಾವಣಗೆರೆ: ದೇಶದಲ್ಲಿ ಮುಂದಿನ 25 ವರ್ಷಗಳ ಕಾಲ ವ್ಯಾಪಾರ– ವಹಿವಾಟಿಗೆ ಪೂರಕ ವಾತಾವರಣ ಇರಲಿದೆ. ಆರ್ಥಿಕ ವಲಯಕ್ಕೆ ಹೆಚ್ಚಿನ ಸಹಕಾರ ಸಿಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಚಕೋರ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಚೌಕಿಪೇಟೆಯಲ್ಲಿರುವ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಜೈನ್ ಇಂಟರ್‌ನ್ಯಾಷನಲ್‌ ಟ್ರೇಡ್ ಆರ್ಗನೈಸೇಷನ್ (ಜಿತೊ) ಶನಿವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಸಂಪನ್ಮೂಲದ ಕ್ರೋಡೀಕರಣ ಹೆಚ್ಚುತ್ತಿದೆ. ಇದರಿಂದಾಗಿ ವ್ಯವಹಾರ ಸುಲಭವಾಗಲಿದೆ. ಬದಲಾಗುತ್ತಿರುವ ವ್ಯವಹಾರ ಶೈಲಿಗೆ ಅನುಗುಣವಾಗಿ ನಾವೂ ಬದಲಾಗಬೇಕು. ಯಾವುದೇ ದೇಶದ ಪ್ರಗತಿಯಲ್ಲಿ ಸುಲಲಿತವಾದ ವ್ಯವಹಾರ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅವರು ಹೇಳಿದರು. ಜಿತೊದ ಕಾರ್ಯದರ್ಶಿ ಗೌತಮ್ ಓಸ್ವಾಲ್, ಅಧ್ಯಕ್ಷ ಚಂಪಾಲಾಲ್ ಬಿ. ಧೆಲಾರಿಯಾ, ಕಾರ್ಯದರ್ಶಿ ಅಜಿತ್ ಓಸ್ವಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.