ADVERTISEMENT

ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:11 IST
Last Updated 28 ಜನವರಿ 2018, 10:11 IST

ಹೊನ್ನಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಸ್ಥಾಪನೆ ಮಾಡಿದ್ದು, ₹ 250 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆ ಹಮ್ಮಿಕೊಂಡಿದ್ದ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ಪ್ರಾಧಿಕಾರದ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ಸ್ವಾಮಿನಿಷ್ಠೆ ಸಾರುವ ಹಾಗೂ ದೇಶಕ್ಕಾಗಿ ಯುವ ನಾಯಕರನ್ನು ತಯಾರು ಮಾಡುವ ಶಾಲೆಯನ್ನು ಸಂಗೊಳ್ಳಿಯಲ್ಲಿ ತೆರೆಯಲು ಮುಖ್ಯಮಂತ್ರಿ ಉದ್ದೇಶಿಸಿ ದ್ದಾರೆ. ಅದಕ್ಕಾಗಿ ನೂರು ಎಕರೆ ಜಾಗ ಮೀಸಲಿಡಲಾಗಿದೆ ಎಂದರು.

ಖಾನಾಪುರ ತಾಲ್ಲೂಕಿನ ನಂದಗಢದಲ್ಲಿ ದೊಡ್ಡ ಮ್ಯೂಸಿಯಂ ನಿರ್ಮಿಸಲಾಗುವುದು. ಅಲ್ಲಿರುವ ಕೆರೆಯಲ್ಲಿ ದೋನಿ ವಿಹಾರ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಕಾಗಿನೆಲೆ ಪೀಠ 25 ವರ್ಷ ಪೂರೈಸಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ವರು ಸ್ವಾಮೀಜಿಗಳನ್ನು ನೇಮಕ ಮಾಡಿ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಹರಿಹರ ತಾಲ್ಲೂಕಿನ ಬೆಳ್ಳೂಡಿಯಲ್ಲಿ ₹ 8 ಕೋಟಿ ವೆಚ್ಚದಲ್ಲಿ ಕೆಎಎಸ್, ಐಎಎಸ್, ಐಪಿಎಸ್ ತರಬೇತಿ ಕೇಂದ್ರವನ್ನು ನಿರಂಜನಾನಂದ ಪುರಿ ಸ್ವಾಮೀಜಿ ಸ್ಥಾಪಿಸಿದ್ದಾರೆ. ಫೆ.8 ಮತ್ತು 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಾತನಾಡಿ, ದೇಶಭಕ್ತನ ಪುತ್ಥಳಿ ಅನಾವರಣ ಯುವಕರಿಗೆ ಮಾದರಿಯಾಗಲಿ ಎಂದು ಕಿವಿಮಾತು ಹೇಳಿದರು. ‘ಪುತ್ಥಳಿ ನಿರ್ಮಾಣಕ್ಕೆ ಶ್ರಮಿಸಿದ ಮುಖಂಡ ಎಚ್‌.ಬಿ.ಮಂಜಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು’ ಎಂದರು.

ಶಾಸಕ ಡಿ.ಜಿ.ಶಾಂತನಗೌಡ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಆಗಸ್ಟ್ 15 ರಂದು ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ. ಜ.26 ಹುತಾತ್ಮರಾದ ದಿನ. ಈ ಎರಡೂ ದಿನಗಳು ಭಾರತದ ಇತಿಹಾಸದಲ್ಲಿ ವಿಶೇಷವಾದ ದಿನಗಳಾಗಿವೆ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ರಾಯಣ್ಣನ ಪ್ರತಿಮೆ ಬಳಿ ಸ್ವಂತ ಖರ್ಚಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿ ಸುವುದಾಗಿ ಭರವಸೆ ನೀಡಿದರು. ಸಂಗೊಳ್ಳಿ ರಾಯಣ್ಣ ಯುವಸೇನೆಯ ಗೌರವಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಕನಸಾಗಿದ್ದ ರಾಯಣ್ಣನ ಪ್ರತಿಮೆ ಸ್ಥಾಪನೆ ಕೊನೆಗೂ ನನಸಾಗಿದೆ ಎಂದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಯಣ್ಣನ ಧೈರ್ಯ, ಸಾಹಸಗಳು ಯುವಕರಿಗೆ ಮಾದರಿಯಾಗಲಿ. ದೇಶಭಕ್ತಿ, ಸ್ವಾಮಿನಿಷ್ಠೆಗೆ ಹೆಸರಾಗಿದ್ದ ಸಂಗೊಳ್ಳಿ ರಾಯಣ್ಣ ಮನಸ್ಸು ಮಾಡಿದ್ದರೆ

ಕಿತ್ತೂರು ಸಂಸ್ಥಾನದ ರಾಜನಾಗಬಹುದಾಗಿತ್ತು. ಹಾಗೆ ಮಾಡದೆ ಕಿತ್ತೂರು ಸಂಸ್ಥಾನಕ್ಕೆ ನಿಷ್ಠರಾಗಿದ್ದರು ಎಂದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹಿರೇಕಲ್ಮಠದ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಸಮಾರಂಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಜಿ.ವಿಶ್ವನಾಥ್, ಎಂ.ಆರ್.ಮಹೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಲೋಚನಮ್ಮ ಫಾಲಾಕ್ಷಪ್ಪ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಮುಖಂಡರಾದ ಅಸಗೋಡು ಜಯಸಿಂಹ ಶಿವಯೋಗಿ, ಕೆ.ವಿ.ಚನ್ನಪ್ಪ, ಬೀರಪ್ಪ, ಅಣ್ಣಪ್ಪ, ವಿಜೇಂದ್ರಪ್ಪ, ಅಬಕಾರಿ ಉಪ ಆಯುಕ್ತ ನಾಗರಾಜ್, ಸಿದ್ದಬಸಪ್ಪ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.