ADVERTISEMENT

ಹೊನ್ನಾಳಿಯಲ್ಲಿ ರಾಜಕೀಯ ಸಂಚಲನ ಸೃಷ್ಠಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:15 IST
Last Updated 28 ಜನವರಿ 2018, 10:15 IST
ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣಕ್ಕೆ ಆಗಮಿಸಿದ ರಾಜ್ಯ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿಯವರನ್ನು ಹೊನ್ನಾಳಿ ತಾಲ್ಲೂಕು ಅರಕೆರೆ ಗ್ರಾಮದಿಂದ ಬೈಕ್ ರ‍್ಯಾಲಿಯಲ್ಲಿ ಕರೆ ತಂದ ದೃಶ್ಯ.
ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣಕ್ಕೆ ಆಗಮಿಸಿದ ರಾಜ್ಯ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿಯವರನ್ನು ಹೊನ್ನಾಳಿ ತಾಲ್ಲೂಕು ಅರಕೆರೆ ಗ್ರಾಮದಿಂದ ಬೈಕ್ ರ‍್ಯಾಲಿಯಲ್ಲಿ ಕರೆ ತಂದ ದೃಶ್ಯ.   

ಹೊನ್ನಾಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಜೊತೆ ಜೊತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರ ರಾಜಕೀಯ ಶಕ್ತಿ ಪ್ರದರ್ಶನ ಎಂದೇ ಇದೀಗ ತಾಲ್ಲೂಕಿನ ಜನರ ಬಾಯಲ್ಲಿ ಕೇಳಿಬರುತ್ತಿದೆ. ಎಚ್.ಬಿ.ಮಂಜಪ್ಪ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೊಂದು ವೇದಿಕೆಯನ್ನು ಕಲ್ಪಿಸಿಕೊಂಡಿದ್ದು ವಿಶೇಷ.

ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಎಚ್.ಬಿ.ಮಂಜಪ್ಪ ಆರಂಭದಲ್ಲಿ ಪ ಪಂ ಸದಸ್ಯರಾಗಿ, ಅಧ್ಯಕ್ಷರಾಗಿ, ತಾ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ, ಜಿ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಸೇವೆ ಸಲ್ಲಿಸಿದವರು. ನಂತರ ಅವರ ಪತ್ನಿಯನ್ನು ಒಮ್ಮೆ ಜಿ.ಪಂ. ಸದಸ್ಯರನ್ನಾಗಿ ಆಯ್ಕೆ ಮಾಡಿ ಕಳಿಸಿದ ಹೆಗ್ಗಳಿಕೆ ಹೊಂದಿದವರು.

ಇದೀಗ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಚ್.ಬಿ. ಮಂಜಪ್ಪ ಹೆಸರು ಕೇಳಿಬಂದಿತ್ತು. ಕೊನೆ ಗಳಿಗೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡರ ಹೆಸರು ಪ್ರಕಟವಾಯಿತು.

ADVERTISEMENT

ಈ ಹಿನ್ನೆಲೆಯಲ್ಲಿ ಈ ಬಾರಿ ಶತಾಯ ಗತಾಯ ಟಿಕೆಟ್ ಗಿಟ್ಟಿಸಲೇಬೇಕು ಎಂದು ಹಠ ತೊಟ್ಟಿರುವ ಅವರು ತಮ್ಮ ರಾಜಕೀಯ ಗುರು ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಹಾಗೂ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರನ್ನು ಬಲವಾಗಿ ನಂಬಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊನ್ನಾಳಿಗೆ ಬರುವಂತೆ ಎಚ್.ಬಿ.ಮಂಜಪ್ಪ ವಿನಂತಿಸಿಕೊಂಡಿದ್ದರು. ಆದರೆ ಜ.26 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಬೇಕಾಗಿರುವುದರಿಂದ ತಮ್ಮ ಬದಲಿಗೆ ಸಾರಿಗೆ ಸಚಿವರನ್ನು ಹೊನ್ನಾಳಿಗೆ ಕಳಿಸಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಓರೆ ನೋಟ ಕೂಡಾ ಇಲ್ಲಿರುವಂತೆ ಕಾಣುತ್ತಿದೆ.

ಅದಕ್ಕೆ ಇಂಬು ಕೊಡುವಂತೆ ಶುಕ್ರವಾರ ನಡೆದ ಸಮಾರಂಭದಲ್ಲಿ ಎಚ್.ಎಂ.ರೇವಣ್ಣ ಭಾಷಣ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಜನತೆ ಎಚ್.ಬಿ. ಮಂಜಪ್ಪ ಅವರಿಗೆ ಟಿಕೆಟ್ ಕೊಡಿಸಿ ಎಂದು ಆಗ್ರಹಿಸಿದ್ದು, ಇದರಿಂದ ಸ್ವಲ್ಪ ಕಸಿವಿಸಿಗೊಂಡ ರೇವಣ್ಣ ಇದು ರಾಜಕೀಯ ಸಮಾರಂಭವಲ್ಲ. ಅದೂ ಅಲ್ಲದೇ ಶಾಸಕ ಡಿ.ಜಿ. ಶಾಂತನಗೌಡರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಈ ಮಾತು ಆಡುವುದು ಸರಿಯಲ್ಲ. ಅದೂ ಅಲ್ಲದೇ, ಎಚ್.ಬಿ. ಮಂಜಪ್ಪ ಅವರಿಗೆ ಟಿಕೆಟ್ ಕೊಡುವ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೆ ಬಿಟ್ಟ ವಿಚಾರ ಎಂದು ತಮ್ಮತ್ತ ನುಗ್ಗಿ ಬಂದ ಚೆಂಡನ್ನು ಮಲ್ಲಿಕಾರ್ಜುನ್ ಅವರತ್ತ ಅಟ್ಟಿದರು.

ಮಲ್ಲಿಕಾರ್ಜುನ್ ಕೂಡಾ ಎಚ್.ಬಿ.ಮಂಜಪ್ಪ ಅವರ ಗುಣಗಾನ ಮಾಡಿದರು. ಅವರಿಗೆ ರಾಜಕಾರಣದ ಎಲ್ಲಾ ವಿದ್ಯೆಗಳು ಕರಗತವಾಗಿವೆ. ಅವರಿಗೆ ಭವಿಷ್ಯವಿದೆ ಎಂದರು.  ಇದರಿಂದ ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಒಂದು ಸ್ಪಷ್ಟ ಸಂದೇಶವಂತೂ ರವಾನೆಯಾದಂತಾಯಿತು. ಟಿಕೆಟ್ ರೇಸ್‌ನಲ್ಲಿ ಎಚ್.ಬಿ.ಮಂಜಪ್ಪ ಅವರ ಹೆಸರು ಇದೆ ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.