ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ: ಬೇಲಿಮಠ ಶ್ರೀ

ಡಿ.ಶ್ರೀನಿವಾಸ
Published 30 ಜನವರಿ 2018, 9:57 IST
Last Updated 30 ಜನವರಿ 2018, 9:57 IST
ತರಳಬಾಳು ಮಹೋತ್ಸವದಲ್ಲಿ ಸೋಮವಾರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. (ಎಡಚಿತ್ರ) ದಾವಣಗೆರೆಯ ಭರತಾಂಜಲಿ ತಂಡದ ಕಲಾವಿದರು ಭರತನಾಟ್ಯ ಪ್ರದರ್ಶಿಸಿದರು
ತರಳಬಾಳು ಮಹೋತ್ಸವದಲ್ಲಿ ಸೋಮವಾರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. (ಎಡಚಿತ್ರ) ದಾವಣಗೆರೆಯ ಭರತಾಂಜಲಿ ತಂಡದ ಕಲಾವಿದರು ಭರತನಾಟ್ಯ ಪ್ರದರ್ಶಿಸಿದರು   

ಜಗಳೂರು: ಯಾರೇ ಒಪ್ಪಲಿ ಅಥವಾ ಒಪ್ಪದಿರಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಬೆಂಗಳೂರಿನ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಹೇಳಿದರು.

ತರಳಬಾಳು ಮಹೋತ್ಸವದಲ್ಲಿ ಸೋಮವಾರ ಮಾತನಾಡಿದ ಅವರು, ಮತ ಹಾಗೂ ಧರ್ಮಕ್ಕೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿಯಬೇಕು. ಜಗತ್ತಿನ ಮಹಾನ್ ಚೇತನ ಬಸವಣ್ಣ ಅವರು ವೈಚಾರಿಕ ಲಿಂಗಾಯತ ಧರ್ಮದ ಮಾರ್ಗದರ್ಶಕರಾಗಿದ್ದಾರೆ. ಬಸವಣ್ಣನವರು ವಿಪ್ರರು ಅಥವಾ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಬಂಡಾಯ ಸಾರುವ ಮೂಲಕ ಲಿಂಗಾಯತ ಧರ್ಮಕ್ಕೆ 12ನೇ ಶತಮಾನದಲ್ಲೇ ಅಡಿಗಲ್ಲನ್ನು ನೆಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಸೇಡು ಮತ್ತು ದ್ವೇಷದಿಂದಾಗಿ ಮನುಷ್ಯ ಇಂದು ಕ್ರೂರ ಪ್ರಾಣಿಯಾಗಿ ಮಾರ್ಪಟ್ಟಿದ್ದಾನೆ ಎಂದು ವಿಷಾದಿಸಿದರು.

ADVERTISEMENT

ಶತ ಶತಮಾನಗಳಿಂದ ಮನುಷ್ಯ ಸಮಾಜದಲ್ಲಿ ದ್ವೇಷದ ಪರಂಪರೆ ಮುಂದುವರಿದುಕೊಂಡು ಹೋಗುತ್ತಿದೆ. ಪ್ರೀತಿ ಮತ್ತು ಸಹಿಷ್ಣುತೆಯ ಧರ್ಮದಿಂದ ಮಾತ್ರ ದ್ವೇಷ ಪರಂಪರೆಯನ್ನು ಮುರಿದು ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಜಗಳೂರು ತಾಲ್ಲೂಕಿನ ಎಲ್ಲಾ 46 ಕೆರೆಗಳನ್ನು ತುಂಬಿಸುವ ಯೋಜನೆ ಘೋಷಣೆಯ ಬಗ್ಗೆ ಶಾಸಕ ಎಚ್.ಪಿ.ರಾಜೇಶ್ ಅವರು ತರಳಬಾಳು ಹುಣ್ಣಿಮೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲಿ ಎಂದು ಸೂಚಿಸಿದರು. ಐ.ಆರ್.ಎಸ್ ಅಧಿಕಾರಿ ಡಾ.ಎಂ.ಡಿ.ವಿಜಯ ಕುಮಾರ ಹಾಗೂ ಪೊಲೀಸ್‌ ಅಧಿಕಾರಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಜಾಬಾಲಿಪುರ ಮಠದ ಜಯ ಬಸವಾನಂದ ಶಿವಾಚಾರ್ಯ ಸ್ವಾಮೀಜಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಶಾಸಕ ಎಚ್.ಪಿ.ರಾಜೇಶ್, ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ. ರಾಮಚಂದ್ರ, ಕೆ.ಬಿ.ಕಲ್ಲೇರುದ್ರೇಶ್, ಡಾ. ಮಂಜುನಾಥಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.