ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಮಾರ್ಗ ಬದಲಾವಣೆ ಸಂಬಂಧ ರಚಿಸಿದ ಸಮಿತಿಯ ವರದಿ ಬಂದ ನಂತರ ಜಗಳೂರಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಪಟ್ಟಣದಲ್ಲಿ ಸಿರಿಗೆರೆ ಮಠ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಬುಧವಾರ ಅವರು ಮಾತನಾಡಿದರು.
ಜಗಳೂರು ಸತತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ಕೆರೆ ತುಂಬಿಸುವುದು ಅಗತ್ಯದ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮೂಲಕವೂ ಈ ಭಾಗಕ್ಕೆ ನೀರು ಹರಿಸಲು ಚಿಂತನೆ ನಡೆದಿದೆ ಎಂದರು.
ಅಲ್ಲದೇ, ಜಗಳೂರಿನ 46 ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸುವ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ನೀರಾವರಿ ಕಲ್ಪಿಸುವುದು ಸರ್ಕಾರದ ಆದ್ಯತಾ ಕೆಲಸ. ಕೆರೆಗಳಿಗೆ ನೀರು ತುಂಬಿಸುವ ನಿರಂತರವಾಗಿ ನಡೆದಿದೆ ಎಂದು ಹೇಳಿದರು.
ಧರ್ಮದ ಉದ್ದೇಶ ಮನುಕುಲದ ಉದ್ಧಾರವೇ ಆಗಿರುತ್ತದೆ. ಧರ್ಮದ ಬಗ್ಗೆ ನಿಷ್ಠೆ ಇರಬೇಕು. ಪರಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು. ಸಹಿಷ್ಣುತೆ ಕಳೆದುಕೊಂಡರೆ ಸಮಾಜದಲ್ಲಿ ಅಶಾಂತಿ, ದ್ವೇಷ, ಅಸೂಯೆ ಬೆಳೆಯಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲವರು ಧರ್ಮದ ಬಗ್ಗೆ ತಪ್ಪು ಅರ್ಥ ವಿವರಣೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು. ಸೈನಿಕ ಹುಳುಬಾಧೆಯಿಂದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ನಷ್ಟವಾಗಿದೆ. ರೈತರಿಗೆ ಪರಿಹಾರ ನೀಡಲು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.
ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಕಾರ್ಯಕ್ರಮವು ಹಳೇಬೀಡಿನಲ್ಲಿ ನಡೆಯಲಿದೆ ಎಂದು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು. ಸಮಾರಂಭದಲ್ಲಿ ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳವಾಡ, ಸಚಿವರಾದ ಎಚ್.ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ ಅವರೂ ಇದ್ದರು.
ಸಿದ್ದರಾಮಯ್ಯ ಭಾಷಣಕ್ಕೆ ಆಕ್ಷೇಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಂತೆ ಜನರು ‘ಮೋದಿ, ಮೋದಿ’ ಎಂದು ಕೂಗಿ ಆಕ್ಷೇಪಿಸಿದರು. ಆದರೆ, ಸಿದ್ದರಾಮಯ್ಯ ವಿಚಲಿತರಾಗದೆ ಭಾಷಣ ಮುಂದುವರಿಸಿದರು. ಜನರ ಕೂಗು ಇನ್ನೂ ಮುಂದುವರಿದಾಗ ಮಧ್ಯೆ ಪ್ರವೇಶಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಇದು ಯಾವುದೇ ಪಕ್ಷದ ಕಾರ್ಯಕ್ರಮ ಅಲ್ಲ. ಭಕ್ತರ ಈ ವರ್ತನೆ ಸಲ್ಲದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಕೂಗು ನಿಂತಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.