ADVERTISEMENT

6 ತಾಲ್ಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ

ಒಂದೇ ಸೂರಿನಡಿ ಪದವಿಪೂರ್ವ ಕಾಲೇಜಿನವರೆಗೂ ಶಿಕ್ಷಣ l ಖಾಸಗಿ ಶಾಲೆಗಳಿಗೆ ಸಡ್ಡು

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:44 IST
Last Updated 3 ಜೂನ್ 2018, 8:44 IST
6 ತಾಲ್ಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ
6 ತಾಲ್ಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ   

ದಾವಣಗೆರೆ: ಸಾಲು–ಸಾಲಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳನ್ನು ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಮುಂದಾಗಿದೆ.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಉದ್ದೇಶವೂ ಇದರ ಹಿಂದೆ ಇದ್ದು, ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಶಾಲೆ ತೆರೆಯಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಪಬ್ಲಿಕ್‌ ಶಾಲೆ ವಿಶೇಷ ಏನು?

ADVERTISEMENT

2018-19ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ‘ಒಂದೇ ಸೂರಿನಡಿ ಶಿಕ್ಷಣ’ ಯೋಜನೆಯಡಿ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದೇ ಶಾಲೆಯಲ್ಲಿ 1ನೇ ತರಗತಿಯಿಂದ ಪಿಯು ಹಂತದವರೆಗೆ ಶಿಕ್ಷಣ ನೀಡಬೇಕು. ಮಕ್ಕಳನ್ನು ಹಾಗೂ ಪೋಷಕರನ್ನು ಮತ್ತೆ ಸರ್ಕಾರಿ ಶಾಲೆಯತ್ತ ಆಕರ್ಷಿಸಬೇಕು ಎಂಬುದು ಪಬ್ಲಿಕ್‌ ಶಾಲೆಗಳ ಸ್ಥಾಪನೆಯ ಹಿಂದಿರುವ ಉದ್ದೇಶ.

‘ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗುವುದು. ಅಗತ್ಯವಿರುವಷ್ಟು ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಕಂಪ್ಯೂಟರ್‌, ಗಣಿತ, ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸ
ಲಾಗುವುದು. ಪ್ರಾಯೋಗಿಕ ಕಲಿಕೆಗೆ ಹೆಚ್ಚು ಆದ್ಯತೆ ಕೊಡಲಾಗುವುದು. ಹಾಗೆಯೇ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚಿನ ಪ್ರೋತ್ಸಾಹ ಕೊಟ್ಟು, ಸಮಗ್ರ ಕಲಿಕೆಗೆ ಒತ್ತು ನೀಡಬೇಕು ಎಂಬುದು ಶಿಕ್ಷಣ ಇಲಾಖೆಯ ಧ್ಯೇಯ. ಇದಕ್ಕಾಗಿ ಪ್ರತಿ ಶಾಲೆಗೂ ಪ್ರತ್ಯೇಕವಾಗಿ ಅನುದಾನ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಎಂ. ನಿರಂಜನ್‌.

ಪ್ರತಿ ತಾಲ್ಲೂಕಿನ ಪ್ರಮುಖ ಹಳ್ಳಿಯೊಂದರಲ್ಲಿ ಈಗಾಗಲೇ ಇರುವ ಪದವಿ ಪೂರ್ವ ಕಾಲೇಜುಗಳನ್ನೇ ಪಬ್ಲಿಕ್‌ ಶಾಲೆಗಳನ್ನಾಗಿ ಮಾರ್ಪಡಿಸ
ಲಾಗಿದೆ. ಈ ಪಬ್ಲಿಕ್‌ ಶಾಲೆ ಸುತ್ತಲಿನ ಶಾಲೆಗಳಿಗೂ ಹತ್ತಿರದಲ್ಲಿ ಇದೆಯೇ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ಆ ಊರಿನಲ್ಲಿ
ರುವ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೆಲ್ಲಾ ಒಗ್ಗೂಡಿಸಿ ಪಬ್ಲಿಕ್‌ ಶಾಲೆಯ ವ್ಯಾಪ್ತಿಗೆ ತರಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು, ಪಬ್ಲಿಕ್‌ ಶಾಲೆಯ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಕಾರ್ಯ
ನಿರ್ವಹಿಸಲಿದ್ದಾರೆ ಎಂದು ತಿಳಿಸುತ್ತಾರೆ ಅವರು.

ಯೋಜನೆ ವಿಸ್ತರಿಸುವ ಚಿಂತನೆ

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪಬ್ಲಿಕ್‌ ಸ್ಕೂಲ್‌ಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ. ಸದ್ಯ ಪ್ರತಿ ತಾಲ್ಲೂಕಿಗೆ ಒಂದರಂತೆ ಶಾಲೆಗಳನ್ನು ಆರಂಭಿಸಲಾಗಿದೆ. ಅವುಗಳನ್ನು ಜನಪ್ರಿಯಗೊಳಿಸಿ, ಮಕ್ಕಳನ್ನು ಸೆಳೆಯಲಾಗುವುದು. ಮುಂದೆ ಹಂತ ಹಂತವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಸ್ಥಾಪಿಸುವ ಉದ್ದೇಶವಿದೆ ಎನ್ನುತ್ತಾರೆ ನಿರಂಜನ್.

ಶಾಲೆಯಿಂದ ಹೊರಗುಳಿದ 234 ಮಕ್ಕಳು

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ 234 ಮಕ್ಕಳು ಪತ್ತೆಯಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 139 ಗಂಡು ಹಾಗೂ 95 ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ಅಂಶ ಪತ್ತೆಯಾಗಿದೆ.

ಕಳೆದ ವರ್ಷವೂ ಶಾಲೆ ಬಿಟ್ಟ 156 ಮಕ್ಕಳು ಪತ್ತೆಯಾಗಿದ್ದರು. ಅವರಲ್ಲಿ 72 ಮಕ್ಕಳನ್ನು ಶಾಲೆಗಳಿಗೆ ಸೇರಿಸಿ, ಶಿಕ್ಷಣ ಕೊಡಿಸುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಿತ್ತು. ಈ ಶೈಕ್ಷಣಿಕ ವರ್ಷದಲ್ಲಿಯೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸುತ್ತಾರೆ ಶಿಕ್ಷಣಾಧಿಕಾರಿ ನಿರಂಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.