ADVERTISEMENT

ಸಂತೇಬೆನ್ನೂರು: ಅಡಿಕೆ ತೋಟದಲ್ಲಿ ಸೇವಂತಿ ಘಮಲು

ಉತ್ತಮ ಲಾಭ ಕಾಣುತ್ತಿರುವ ಗೊಲ್ಲರಹಳ್ಳಿ ರೈತ ತಿಮ್ಮಣ್ಣ

ಕೆ.ಎಸ್.ವೀರೇಶ್ ಪ್ರಸಾದ್
Published 17 ಆಗಸ್ಟ್ 2022, 3:32 IST
Last Updated 17 ಆಗಸ್ಟ್ 2022, 3:32 IST
ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿಯ ರೈತ ತಿಮ್ಮಣ್ಣ ಅವರ ಅಡಿಕೆ ತೋಟದ ನಡುವೆ ಸೇವಂತಿ ಬೆಳೆ ಸಾಲು.
ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿಯ ರೈತ ತಿಮ್ಮಣ್ಣ ಅವರ ಅಡಿಕೆ ತೋಟದ ನಡುವೆ ಸೇವಂತಿ ಬೆಳೆ ಸಾಲು.   

ಸಂತೇಬೆನ್ನೂರು: ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಸೇವಂತಿ ಪುಷ್ಪ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ ಗೊಲ್ಲರಹಳ್ಳಿ ರೈತ ತಿಮ್ಮಣ್ಣ.

ತಮ್ಮ ಒಂದು ಎಕರೆ ಜಮೀನಿನಲ್ಲಿ ಸೇವಂತಿ ಗಿಡಗಳನ್ನು ಪೋಷಣೆ ಮಾಡಿದ್ದು, ಸತತ ಮಳೆಯಲ್ಲೂ ಸೇವಂತಿ ಗಿಡಗಳ ಸಾಲುಗಳು ನಳನಳಿಸುತ್ತಿವೆ. ಒಂದು ಸೇವಂತಿ ಸಸಿಗೆ ₹ 1ರಂತೆ 10,000 ಸಸಿಗಳನ್ನು ಖರೀದಿಸಿ ತಂದು ಎರಡು ಅಡಿಕೆ ಸಾಲುಗಳ ನಡುವೆ ನಾಟಿ ಮಾಡಿದ್ದಾರೆ. ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ್ದು, ಇದೀಗ ಹೂವುಗಳು ಅರಳಲಾರಂಭಿಸಿವೆ. ಸಾವಯವ ಗೊಬ್ಬರ, ಲಘು ಪ್ರಮಾಣದ ಔಷಧ ಸಿಂಪಡಿಸಿದ್ದು, ಗಿಡಗಳು ಸಮೃದ್ಧವಾಗಿ ಬೆಳೆದಿವೆ.

‘ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಆಗ ಸೇವಂತಿ ಹೂವುಗಳಿಗೆ ಬೇಡಿಕೆ ಹೆಚ್ಚು. ಲೆಕ್ಕಚಾರದ ಮೂಲಕ ಶ್ರಾವಣ ಮಾಸದಲ್ಲಿ ಹೂವು ಬಿಡಿಸುವಂತೆ ಬೆಳೆಯಲು ಯೋಜನೆ ರೂಪಿಸಬೇಕು. ಸತತ ಎರಡು ತಿಂಗಳು ಹೂ ಮಾರಾಟಕ್ಕೆ ಲಭ್ಯವಾಗುತ್ತದೆ. ವರಮಹಾಲಕ್ಷ್ಮಿ, ನಾಗರಪಂಚಮಿ, ಗೌರಿ–ಗಣೇಶ, ದಸರಾ ಹಬ್ಬ ಹಾಗೂ ವಿಶೇಷ ಪೂಜೆಗಳಿಗೆ ಸತತ ಬೇಡಿಕೆ ಇರುತ್ತದೆ. ಭರಪೂರ ಬೇಡಿಕೆಯಿಂದ ತೃಪ್ತಿಕರ ಬೆಲೆಯೂ ಸಿಗಲಿದೆ’ ಎನ್ನುತ್ತಾರೆ ತಿಮ್ಮಣ್ಣ.

ADVERTISEMENT

‘ಜಮೀನಿನ ಪಕ್ಕದಲ್ಲಿಯೇ ರಾಜ್ಯ ಹೆದ್ದಾರಿ ಇದ್ದು, ಅಟ್ಟಣಿಗೆ ನಿರ್ಮಿಸಿಕೊಂಡಿದ್ದೇನೆ. ಸ್ವಂತ ಮಾರುಕಟ್ಟೆಯಲ್ಲಿ ನಿತ್ಯವೂ 20 ಮಾರು ಸೇವಂತಿ ಹೂ ಮಾರಾಟ ಮಾಡುತ್ತೇನೆ. ಬೇಡಿಕೆಗೆ ಅನುಗುಣವಾಗಿ ಪ್ರತಿ ಮಾರಿಗೆ ₹ 50 ರಿಂದ ₹ 100 ಬೆಲೆ ನಿಗದಿಗೊಳಿಸುತ್ತೇನೆ. ವಾಹನ ಸಂಚಾರ ದಟ್ಟಣೆ ಇರುವ ಕಾರಣ ಹೂವು ಖರೀದಿಸುವರು ಹೆಚ್ಚು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಗಟು ದರದಲ್ಲಿ ಮಾರಾಟ ಮಾಡಿದರೆ ಪ್ರತಿ ಕೆ.ಜಿ. ಹೂವಿಗೆ ₹ 100 ದರ ಕೊಡುತ್ತಾರೆ. ನಾವೇ ಹೂವು ಕಟ್ಟಿ ಮಾರಿದರೆ ಲಾಭ ಹೆಚ್ಚು. ಹಾಗಾಗಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಹೂವು ಕಟ್ಟಿ ಮಾರಾಟ ಮಾಡುತ್ತೇವೆ. ಪ್ರತಿ ಮಾರಿಗೆ ₹ 30 ದರ ನಿಗದಿಪಡಿಸಿದ್ದೇವೆ. ಲಾಭವೂ ಚೆನ್ನಾಗಿ ಸಿಗುತ್ತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.