ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಶಾಮನೂರು–ಭೀಮಸಮುದ್ರ ಕುಟುಂಬಗಳ ಸೊಸೆಯಂದಿರ ಸೆಣಸು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 5:21 IST
Last Updated 2 ಏಪ್ರಿಲ್ 2024, 5:21 IST
ಡಾ.ಪ್ರಭಾ ಮಲ್ಲಿಕಾರ್ಜುನ್
ಡಾ.ಪ್ರಭಾ ಮಲ್ಲಿಕಾರ್ಜುನ್   

ಮಹಿಳೆಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಈ ಕ್ಷೇತ್ರ, ರಾಜ್ಯದಲ್ಲಿ ಕೂತೂಹಲ ಕೆರಳಿಸಿದೆ. ದಾವಣಗೆರೆಯ ಪ್ರತಿಷ್ಠಿತ ಕುಟುಂಬಗಳೆರಡರ ಸ್ಪರ್ಧೆ ಎಂದೇ ಬಿಂಬಿತವಾಗಿದೆ. ದಾವಣಗೆರೆ ಜಿಲ್ಲೆಯ 7 ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭೆ ಕ್ಷೇತ್ರ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ.

ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಅವರ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ (ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಪತ್ನಿ) ಹಾಗೂ ಬಿಜೆಪಿಯಿಂದ ಮಾಜಿ ಸಂಸದ, ದಿವಂಗತ ಜಿ.ಎನ್. ಮಲ್ಲಿಕಾರ್ಜುನಪ್ಪ ಅವರ ಸೊಸೆ ಗಾಯತ್ರಿ ಸಿದ್ದೇಶ್ವರ (ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ) ಕಣದಲ್ಲಿದ್ದಾರೆ. ಇಬ್ಬರೂ ಹೊಸಮುಖಗಳು. 1977ರಲ್ಲಿ ರೂಪುಗೊಂಡಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 12 ಚುನಾವಣೆಗಳು ನಡೆದಿದ್ದು, 6ನೇ ಬಾರಿ ಈ ಎರಡು ಕುಟುಂಬಗಳು ಕಣದಲ್ಲಿ ಎದುರಾಳಿಯಾಗಿವೆ.

ಗಾಯತ್ರಿ ಸಿದ್ದೇಶ್ವರ ಅವರು ಜಿ.ಎಂ.ಹಾಲಮ್ಮ ಚಾರಿಟಬಲ್‌ ಟ್ರಸ್ಟ್‌ ಮೂಲಕ ಸಾಮಾಜಿಕ ಕಾರ್ಯಗಳ ಜೊತೆಗೆ ಮನೆ ಹಾಗೂ ತೋಟದ ನಿರ್ವಹಣೆಯ ಜವಾಬ್ದಾರಿ ಹೊತ್ತವರು. ಚುನಾವಣೆ ವೇಳೆ ಮಾವ ಮಲ್ಲಿಕಾರ್ಜುನಪ್ಪ ಹಾಗೂ ಪತಿ ಸಿದ್ದೇಶ್ವರ ಪರ ಪ್ರಚಾರ ನಡೆಸಿದ್ದು ಬಿಟ್ಟರೆ, ರಾಜಕೀಯದಲ್ಲಿ ಪರಿಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಪತಿ ಜಿ.ಎಂ. ಸಿದ್ದೇಶ್ವರ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಅವರು ನೆಚ್ಚಿಕೊಂಡಿದ್ದಾರೆ.

ADVERTISEMENT

ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಸಕ್ರಿಯರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪತಿ ಹಾಗೂ ಮಾವನ ಪರ ಪ್ರಚಾರ ಮಾಡಿದ ಅನುಭವವಿದೆ. ಪತಿ ಎಸ್‌.ಎಸ್. ಮಲ್ಲಿಕಾರ್ಜುನ್ ಹಾಗೂ ಮಾವ ಶಾಮನೂರು ಶಿವಶಂಕರಪ್ಪ ಅವಧಿಯಲ್ಲಿನ ಅಭಿವೃದ್ಧಿ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ‘ಕೈ’ಹಿಡಿಯಲಿವೆ ಎಂಬ ಆಶಾಭಾವದಲ್ಲಿದ್ದಾರೆ.

ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಂಡಾಯವೆದ್ದಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಸಭೆ ನಡೆಸಿ ತಣ್ಣಗೆ ಮಾಡಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವರೇ ಎಂಬುದು ಸದ್ಯದ ಕುತೂಹಲ.

ದಾವಣಗೆರೆ

ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ: ಕಾಂಗ್ರೆಸ್ –6, ಬಿಜೆಪಿ–1, ಪಕ್ಷೇತರ–1

ಒಟ್ಟು ಮತದಾರರು: 16,79,746

ಪುರುಷರು: 8,38,705

ಮಹಿಳೆಯರು: 8,40,340

ಲಿಂಗತ್ವ ಅಲ್ಪಸಂಖ್ಯಾತರು: 136

2019–ಹೆಸರು–ಪಕ್ಷ–ಪಡೆದ ಮತಗಳು

ಗೆದ್ದವರು–ಜಿ.ಎಂ.ಸಿದ್ದೇಶ್ವರ–ಬಿಜೆಪಿ–6,52,996

ಸಮೀಪದ ಪ್ರತಿಸ್ಪರ್ಧಿ–ಎಚ್.ಬಿ. ಮಂಜಪ್ಪ–ಕಾಂಗ್ರೆಸ್–4,83,294

ಗಾಯತ್ರಿ ಸಿದ್ದೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.