ADVERTISEMENT

ಅಹಿಂಸೆಯಿಂದ ಸ್ವಾತಂತ್ರ್ಯ ತಂದ ಮಹಾಚೇತನ

ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:01 IST
Last Updated 3 ಅಕ್ಟೋಬರ್ 2022, 4:01 IST
ದಾವಣಗೆರೆಯ ಗಾಂದಿ ಭವನದಲ್ಲಿ ಗಾಂದಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಚರಕದಲ್ಲಿ ನೂಲು ನೇಯುತ್ತಿರುವುದು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಗಾಂದಿ ಭವನದಲ್ಲಿ ಗಾಂದಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಚರಕದಲ್ಲಿ ನೂಲು ನೇಯುತ್ತಿರುವುದು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಬಣ್ಣಿಸಿದರು.

ಇಲ್ಲಿನ ಶ್ರೀರಾಮನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಲ್ಲಿ ಚರಕದಲ್ಲಿ ನೂಲು ನೇಯ್ದು, ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳನ್ನು ರೂಪಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು. ಪ್ರಸ್ತುತ ದಿನಮಾನಗಳಲ್ಲಿ ಮಹಾತ್ಮ ಗಾಂಧಿಯವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ಸಾಗೋಣ ಎಂದರು.

ADVERTISEMENT

ಗಾಂಧೀಜಿ ಸತ್ಯ, ಸಮಾನತೆ, ಅಹಿಂಸೆ, ಶಾಂತಿಯ ಬಹುದೊಡ್ಡ ಪ್ರತಿಪಾದಕರಾಗಿದ್ದಾರೆ. ಇಂದು ವಿಶ್ವದಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರ ಜೀವನ ಮತ್ತು ತತ್ವಾದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಆತ್ಮಕಥೆ ಯನ್ನು ಓದಿ ತಿಳಿಯಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ದೇಶಕ್ಕೆ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಪ್ರಾಮಾಣಿಕವಾದ ಆಡಳಿತ ನೀಡಿದ ಅಪರೂಪದ ಪ್ರಧಾನಿ ಎಂದು ನೆನಪಿಸಿಕೊಂಡರು.

ಗಾಂಧೀಜಿ ಅವರು ಅಹಿಂಸಾ ಮಾರ್ಗವನ್ನು ತೋರಿಸಿಕೊಡದೇ ಇದ್ದಿದ್ದರೆ ಬ್ರಿಟಿಷರು ಎಲ್ಲರನ್ನು ಗುಂಡಿಟ್ಟುಕೊಂದು ಮುಗಿಸುತ್ತಿದ್ದರು. ಮಹಾತ್ಮಗಾಂಧೀಜಿಯಿಂದಾಗಿ ದೇಶ ಸುಭಿಕ್ಷೆಯತ್ತ ಸಾಗುತ್ತಿದೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ತಿಳಿಸಿದರು.

ಇಲ್ಲಿವರೆಗಿನ ಪ್ರಧಾನಿಗಳಲ್ಲಿಯೇ ಶಾಸ್ತ್ರಿ ಅವರು ಅಚ್ಚುಮೆಚ್ಚಿನವರು. ಅವರು ಒಂದು ವರ್ಷ ಮಾತ್ರ ಪ್ರಧಾನಿಯಾಗಿದ್ದರು. ಹೆಚ್ಚಿಗೆ ಇರುತ್ತಿದ್ದರೆ ದೇಶದ ಪರಿಸ್ಥಿತಿಯೇ ಬದಲಾಗುತ್ತಿತ್ತು ಎಂದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಂ.ಮಂಜಪ್ಪ ಉಪನ್ಯಾಸ ನೀಡಿ, ‘ಗಾಂಧೀಜಿ ಎಂದರೆ ಪರ್ಯಾಯ ಶೋಧಕಗಳ ವ್ಯಕ್ತಿ. ಬ್ರಿಟೀಷರ ಸಾಮ್ರಾಜ್ಯಶಾಹಿ ಆಡಳಿತದ ಬದಲು ಸ್ವಾತಂತ್ರ್ಯ, ಹಿಂಸೆಯ ಬದಲು ಅಹಿಂಸೆ, ಬೃಹತ್‌ ಕೈಗಾರಿಕೆಗಳ ಬದಲು ಗುಡಿ ಕೈಗಾರಿಕೆ ಹೀಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡವರು. ದೇಶದ ಮೂಲೆ ಮೂಲೆಗೆ ಸಂಚರಿಸಿ ಜನರ ನಾಡಿಮಿಡಿತ ಅರಿತವರು’ ಎಂದು ವಿಶ್ಲೇಷಿಸಿದರು.

ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿಗಳಾದ ಸೃಜನ್ ಎಂ ಕುಲಕರ್ಣಿ, ನೇತ್ರಾವತಿ ಭಗವದ್ಗೀತೆ, ರಿದಾ ಟಿ. ಮತ್ತು ಕವನ ಕುರಾನ್ ಹಾಗೂ ಸೋಹನ್ ಬೈಬಲ್ ಪಠಣ ಮಾಡಿದರು. ಅಜಯ್ ನಾರಾಯಣ್ ರಾವ್ ತಂಡ ಗೀತಗಾಯನ ನಡೆಸಿಕೊಟ್ಟಿತು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ್, ಎಂ.ಡಿ. ಲಕ್ಷ್ಮೀನಾರಾಯಣ, ನೆ.ಲ. ನರೇಂದ್ರಬಾಬು, ಮೇಯರ್‌ ಆರ್.ಜಯಮ್ಮ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ.ಚನ್ನಪ್ಪ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್., ಉಪವಿಭಾಗಾಧಿಕಾರಿ ದುರ್ಗಾಶ್ರೀ, ವಿಶ್ವನಾಥ ಮುದಜ್ಜಿ, ಕುಮಾರಸ್ವಾಮಿ, ರವೀಂದ್ರ ಮಲ್ಲಾಪುರ ಸಹಿತ ವಿವಿಧ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.