ಮಲೇಬೆನ್ನೂರು: ಪಟ್ಟಣದ ಗ್ರಾಮದೇವತೆ ಏಕನಾಥೇಶ್ವರಿ (ಹೊರಗಿನಮ್ಮ) ದೇವಾಲಯದಲ್ಲಿ ಆಷಾಢ ಮಾಸದ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ, ‘ಪರವು’ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಾಂಪ್ರದಾಯಿಕ ಗಂಗಾಪೂಜೆ ನಂತರ ಮೂಲ ದೇವಾಲಯದಲ್ಲಿ ಪೂಜೆ ನೆರವೇರಿಸಿ ಪುಷ್ಪಾಲಂಕಾರ ಮಾಡಿದ್ದರು. ನಂತರ ಮಹಿಳೆಯರು ಕುಂಕುಮಾರ್ಚನೆ ಮಾಡಿ, ಉಡಿ ಸಮರ್ಪಿಸಿದರು. ಜೋಗಮ್ಮಗಳ ಪಡ್ಡಲಗಿಗೆ ಪೂಜೆ, ಧಾನ್ಯ ಸಮರ್ಪಿಸಿದರು.
ಉಧೋ.. ಉಧೋ.. ಉದ್ಘೋಷ ಮುಗಿಲು ಮುಟ್ಟಿತ್ತು. ಜನತೆ ಮಳೆ, ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯವನ್ನು ಅಲಂಕರಿಸಲಾಗಿತ್ತು. ಅಲ್ಲದೇ ಗ್ರಾಮದ ವಿವಿಧ ದೇವಾಲಯಗಳ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಯೋಜಕರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.
ಸುತ್ತಮುತ್ತಲಿನ ಗ್ರಾಮಗಳ ಬಹಳಷ್ಟು ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಬನ್ನಿ ಕಟ್ಟೆ ಕಾಳಿಕಾ ಮೂರ್ತಿ ಪ್ರತಿಷ್ಠಾಪನೆ: ದೇವಾಲಯದ ಬಳಿ ಹೊಸದಾಗಿ ನಿರ್ಮಿಸಿದ ಬನ್ನಿಕಟ್ಟೆ, ಬನ್ನಿ ಮಹಾಂಕಾಳಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಹೋಮ– ಹವನ ಗುರುವಾರ ತಡರಾತ್ರಿ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.