ADVERTISEMENT

ಕಿಟ್‌ಗಾಗಿ ವಸತಿನಿಲಯದ ವಿದ್ಯಾರ್ಥಿಗಳಿಬ್ಬರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:28 IST
Last Updated 5 ಜುಲೈ 2022, 4:28 IST
ದಾವಣಗೆರೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಸೋಮವಾರ ಧರಣಿ ಕುಳಿತಿರುವ ವಿದ್ಯಾರ್ಥಿಗಳು
ದಾವಣಗೆರೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಸೋಮವಾರ ಧರಣಿ ಕುಳಿತಿರುವ ವಿದ್ಯಾರ್ಥಿಗಳು   

ದಾವಣಗೆರೆ: ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಸೋಪ್‌ ಕಿಟ್‌ ಮೂರು ತಿಂಗಳಿಂದ ನೀಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳಿಬ್ಬರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಒಂದು ಗಂಟೆಗೂ ಹೆಚ್ಚು ಹೊತ್ತು ಧರಣಿ ಮಾಡಿದ್ದಾರೆ.

ಸರಸ್ವತಿ ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿನಿಲಯದ ವಿದ್ಯಾರ್ಥಿಗಳಾದ ಕಿರಣ್‌ ಕುಮಾರ್‌ ಎಲ್‌.ಕೆ. ಮತ್ತು ಅಂಜು ಎಲ್‌. ಧರಣಿ ನಡೆಸಿದವರು.

ಮೂರು ತಿಂಗಳಿನಿಂದ ಸೋಪು ಕಿಟ್‌ ಬಂದಿಲ್ಲ. ಅದನ್ನು ಕೇಳಲು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಸೋಮವಾರ ಮಧ್ಯಾಹ್ನ 12.50ಕ್ಕೆ ತೆರಳಿದ್ದರು. ‘ಸೋಪು ಕಿಟ್ ಸರ್ಕಾರ ನೀಡಬೇಕು. ನಾವೇನು ಮಾಡಲು ಬರಲ್ಲ’ ಎಂದು ತಿಳಿಸಿ ಸಮಾಜ ಕಲ್ಯಾಣಾಧಿಕಾರಿ ಹೊರಗೆ ಹೋದರು. ‘ನಮಗೆ ನ್ಯಾಯ ಒದಗಿಸಿ’ ಎಂದು ಇಬ್ಬರು ವಿದ್ಯಾರ್ಥಿಗಳು ಕಚೇರಿಯ ಮೆಟ್ಟಿಲು ಬಳಿಯೇ ಧರಣಿಕುಳಿತರು.

ADVERTISEMENT

‘ಮಧ್ಯಾಹ್ನ 2.30ರವರೆ ಸುಮಾರಿಗೆ ಸಮಾಜ ಕಲ್ಯಾಣಾಧಿಕಾರಿ ಕಚೇರಿಗೆ ಹಿಂತಿರುಗಿದರು. ಅಲ್ಲಿಯವರೆಗೂ ನಾವು ಧರಣಿ ಕುಳಿತಿದ್ದೆವು. ಅವರು ನಮ್ಮ ವಸತಿನಿಲಯದ ವಾರ್ಡನ್‌ರನ್ನು ಕರೆಸಿದರು. ಬಳಿಕ ಮಾತುಕತೆ ನಡೆಸಿದರು. ಸರ್ಕಾರಕ್ಕೆ ಈ ಬಗ್ಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಸೋಪು ಒದಗಿಸಲು ಕ್ರಮ ವಹಿಸಲಾಗುವುದು ಎಂದು ವಾರ್ಡನ್‌ ತಿಳಿಸಿದರು. ಈ ಇಬ್ಬರ ಭರವಸೆಯ ಬಳಿಕ ಪ್ರತಿಭಟನೆ ನಿಲ್ಲಿಸಿದ್ದೇವೆ’ ಎಂದು ಕಿರಣ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.