ADVERTISEMENT

ಕಿರಿದಾದ ರಸ್ತೆ ಚರಂಡಿಗೆ ಇಳಿದ ಖಾಸಗಿ ಬಸ್: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:19 IST
Last Updated 3 ಜುಲೈ 2025, 15:19 IST
ಮಾಯಕೊಂಡ ಸಮೀಪದ ಪರಶುರಾಮಪುರ ಬಳಿ ಚಾಲಕನ‌ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಖಾಸಗಿ ಬಸ್
ಮಾಯಕೊಂಡ ಸಮೀಪದ ಪರಶುರಾಮಪುರ ಬಳಿ ಚಾಲಕನ‌ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಖಾಸಗಿ ಬಸ್   

ಮಾಯಕೊಂಡ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಚರಂಡಿಗೆ ಇಳಿದ ಘಟನೆ ಗುರುವಾರ ಬೆಳಿಗ್ಗೆ ಸಮೀಪದ ಪರಶುರಾಮಪುರ ಬಳಿ ನಡೆದಿದೆ.

ಈ ಮಾರ್ಗ ತೀರಾ ಕಿರಿದಾಗಿದ್ದು ಸಂಚಾರಕ್ಕೆ ಹೆಚ್ಚು ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಿದ್ದು, ಲಾರಿ ಮತ್ತು ಬಸ್ ಎದುರಾಗಿವೆ. ರಸ್ತೆ ಚಿಕ್ಕದಾಗಿದ್ದು ಬಸ್ ಚಾಲಕ ರಸ್ತೆ ಪಕ್ಕಕ್ಕೆ ತೆಗೆದುಕೊಂಡಾಗ ತಪ್ಪಿ ಚರಂಡಿ ಮೂಲಕ ರೈತರ ಜಮೀನಿಗೆ ನುಗ್ಗಿದೆ. ಈ ವೇಳೆ ಬಸ್ಸಿನಲ್ಲಿ ಸುಮಾರು 30-40 ಪ್ರಯಾಣಿಕರು ಇದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕ ರವಿ ಕುಮಾರ್ ಹೇಳಿದರು.

ಕಳೆದ ಮೂರ್ನಾಲ್ಕು ತಿಂಗಳಿಂದ ಕೊಡಗನೂರು ಕೆರೆ ಏರಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ದಾವಣಗೆರೆ, ಹೊಳಲ್ಕೆರೆಗೆ ಸಂಚರಿಸುವ ವಾಹನಗಳು ಕೊಡಗನೂರು ಕ್ರಾಸ್ ಮೂಲಕ, ಬೊಮ್ಮೆನಹಳ್ಳಿ, ಪರಶುರಾಮಪುರ ಮಾರ್ಗವಾಗಿ ಸಾಗುತ್ತಿವೆ. ಆದರೆ ಮಾರ್ಗ ತೀರಾ ಕಿರಿದಾಗಿದೆ. ಕೆರೆ ಏರಿ ದುರಸ್ತಿ ಮಾಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಪರ್ಯಾಯ ರಸ್ತೆ ನಿರ್ಮಿಸದೆ ಇರುವುದೇ ಇಂಥ ಸಮಸ್ಯೆ, ಅವಘಡಕ್ಕೆ ಕಾರಣವಾಗಿದೆ. ಬಸ್ ತೆರವು ಕಾರ್ಯ ಮಾಡುವವರೆಗೂ ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿ ಪ್ರಯಾಣಿಕರು ಪರದಾಡಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನ ಶೀಘ್ರವೇ ಕೆರೆ ಏರಿಯ ದುರಸ್ತಿ ಕಾರ್ಯ ಮುಗಿಸಿ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ’ ಎನ್ನುತ್ತಾರೆ ರೈತ ಮುಖಂಡ ಗೌಡ್ರ ಅಶೋಕ್ ಮಾಯಕೊಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.