ADVERTISEMENT

15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ- ಬಿ.ಸಿ. ನಾಗೇಶ್‌

ಹಳೇ ಬಿಸಲೇರಿ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡದ ಹಸ್ತಾಂತರ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:56 IST
Last Updated 15 ಜೂನ್ 2022, 6:56 IST
ದಾವಣಗೆರೆ ಜಿಲ್ಲೆಯ ಹಳೇ ಬಿಸಲೆರಿ ಗ್ರಾಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಕುಂದೂರು ಮುರಿಗೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೀಯನ್ನು ಬಸವನಗೌಡ ಹಸ್ತಾಂತರಿಸಿದರು.
ದಾವಣಗೆರೆ ಜಿಲ್ಲೆಯ ಹಳೇ ಬಿಸಲೆರಿ ಗ್ರಾಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಕುಂದೂರು ಮುರಿಗೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೀಯನ್ನು ಬಸವನಗೌಡ ಹಸ್ತಾಂತರಿಸಿದರು.   

ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂಬ ಕಾರಣಕ್ಕೆ ಈ ಬಾರಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ತಾಲ್ಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದ ಗೌರಮ್ಮ ಕುಂದೂರು– ವೀರಭದ್ರಪ್ಪ ಟ್ರಸ್ಟ್ ಹಾಗೂ ಬೆಂಗಳೂರಿನ ಕುಂದೂರು ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ನಿರ್ಮಿಸಿರುವ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 48,000 ಶಾಲೆಗಳಲ್ಲಿ 29,000 ಶಾಲೆಗಳು ಸುಸಜ್ಜಿತ ಕಟ್ಟಡ ಮತ್ತು ಎಲ್ಲ ಮೂಲಸೌಕರ್ಯಗಳನ್ನು ಹೊಂದಿವೆ. ಸುಮಾರು 7000 ಶಾಲೆಗಳಲ್ಲಿ ಕಟ್ಟಡಗಳು ಸರಿ ಇಲ್ಲ. ಮೂಲ ಸೌಲಭ್ಯಗಳ ಕೊರತೆ ಇವೆ. ಉಳಿದ ಶಾಲೆಗಳಲ್ಲಿ ಕೊಠಡಿಗಳು ಚೆನ್ನಾಗಿವೆ. ಆದರೆ ಮೈದಾನ, ಆವರಣಗೋಡೆ ಇನ್ನಿತರ ಸೌಕರ್ಯಗಳಿಲ್ಲ. ದಾವಣಗೆರೆ ಜಿಲ್ಲೆಗೆ 1200 ಕೊಠಡಿಗಳ ಅಗತ್ಯವಿದೆ ಎಂದು ಬೇಡಿಕೆ ಸಲ್ಲಿಸಿದ್ದಾರೆ. ಸದ್ಯ ರಾಜ್ಯದಲ್ಲಿ 7000 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹಂತಹಂತವಾಗಿ ಎಲ್ಲ ಸೌಕರ್ಯಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ADVERTISEMENT

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತ ಶಾಲೆಯ ಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ. ಬಸವನಗೌಡ ಹಾಗೂ ಅವರ ಕುಟುಂಬದವರ ಸಾಮಾಜಿಕ ಸೇವಾ ಕಾರ್ಯ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಕೂಲ್ ಕಾಂಪ್ಲೆಕ್ಸ್ ಎನ್ನುವ ಅಂಶವಿದೆ. ಮಗುವಿಗೆ ಮೂರು ವರ್ಷ ಆದಲ್ಲಿಂದ 12ನೇ ತರಗತಿ ಮುಗಿಸುವವರೆಗೆ ಒಂದೇ ಕಡೆ ಓದಲು ಅವಕಾಶ ಸಿಗಬೇಕು ಎಂಬುದು ಇದರ ಉದ್ದೇಶ. ಮಗು ಅಂಗನವಾಡಿಯಲ್ಲಿ ಕಲಿತು 1ನೇ ತರಗತಿಗೆ ಬೇರೆ ಪರಿಸರಕ್ಕೆ ಹೋದರೆ ಅಲ್ಲಿ ಹೊಂದಿಕೊಳ್ಳಲು ಎರಡು ತಿಂಗಳು ಬೇಕು. ಇದೇ ರೀತಿ ಪ್ರೌಢಶಾಲೆಗೆ, ಪಿಯುಸಿಗೆ ಬೇರೆ ಕಡೆ ಹೋಗುವಾಗ ಹೊಂದಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಒಂದೇ ಕಡೆ ವಿದ್ಯಾಭ್ಯಾಸ ನಡೆದಾಗ ಈ ಸಮಸ್ಯೆ ಇರುವುದಿಲ್ಲ. ಹಳೇಬಿಸಲೇರಿಯಲ್ಲಿ ಕೂಡ ಅಂಗನವಾಡಿಯಿಂದ 7ನೇ ತರಗತಿವರೆಗೆ ಒಂದೇಕಡೆ ವಿದ್ಯಾಭ್ಯಾಸ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಇತ್ತೀಚಿಗೆ ನಡೆದ ಐಎಎಸ್ ಪರೀಕ್ಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಆಯ್ಕೆಯಾದ 24 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿ. ತಾಯಿನುಡಿಯಲ್ಲಿ ಓದಿದರೆ ಮಕ್ಕಳಿಗೆ ಅರ್ಥವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ನಮಗೆ ಇಂಗ್ಲಿಷ್‌ ಹುಚ್ಚು ಹಿಡಿದಿರುವುದರಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಕಟ್ಟಡ ನಿರ್ಮಾಣ ಕಾರ್ಯ ಒಂದು ಹಂತದ ಕೆಲಸ. ಅದನ್ನು ನಿರ್ವಹಿಸಿಕೊಂಡು ಹೋಗುವುದು ಬಹಳ ಮುಖ್ಯ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ತಾವು ಹುಟ್ಟಿ, ಬೆಳೆದು, ಓದಿದ ಊರಿಗೆ ಹೋಗಿ ಏನಾದರೂ ಮಾಡಬೇಕು ಎನ್ನುವ ಕನಸಿನಂತೆ ಹಳೆ ಬಿಸಲೇರಿ ಗ್ರಾಮದಲ್ಲಿ ಹೈಟೆಕ್ ಶಾಲಾ ಕಟ್ಟಡ ಹಾಗೂ ಸಮುದಾಯ ಭವನವನ್ನು ಕೆ.ವಿ. ಬಸವನಗೌಡ ಮತ್ತು ಕುಟುಂಬ ನಿರ್ಮಿಸಿದೆ. ಈ ರೀತಿಯಾಗಿ ಜಿಲ್ಲೆಯಲ್ಲಿ ದಾನಿಗಳು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಮುಂದಾದರೆ ಕಟ್ಟಡಗಳ ಕೊರತೆಗಳು ಉಂಟಾಗುವುದಿಲ್ಲ’ ಎಂದು ತಿಳಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್, ‘ತಾವು ಕಷ್ಟಪಟ್ಟು ದುಡಿದ ಹಣವನ್ನು ದಾನ ಮಾಡೋದಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲ. ಕಲಿತು ಬೆಂಗಳೂರಿಗೆ, ಬೇರೆಡೆಗೆ ಹೋಗುವ ಎಲ್ಲರೂ ಈ ರೀತಿ ಕೊಡುಗೆ ನೀಡುವಂತಾಗಬೇಕು’ ಎಂದು ಆಶಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಡಿಡಿಪಿಐ ಜೆ.ಆರ್. ತಿಪ್ಪೇಶಪ್ಪ, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.