ADVERTISEMENT

ಅನರ್ಹರ ಟೀಕೆಗೆ ಉತ್ತರಿಸುವ ಅಗತ್ಯವಿಲ್ಲ : ದಿನೇಶ್ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 12:56 IST
Last Updated 30 ನವೆಂಬರ್ 2019, 12:56 IST
ಹರಪನಹಳ್ಳಿ ಪಿ.ಟಿ.ಪರಮೇಶ್ವರನಾಯ್ಕ ಶಾಸಕರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿದರು.
ಹರಪನಹಳ್ಳಿ ಪಿ.ಟಿ.ಪರಮೇಶ್ವರನಾಯ್ಕ ಶಾಸಕರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿದರು.   

ದಾವಣಗೆರೆ: ‘ಬಿಜೆಪಿ ಅಡ್ವಾನ್ಸ್‌ ಪಕ್ಷ. ಅವರಿಂದ ಅಡ್ವಾನ್ಸ್‌ ಪಡೆದು, ಫೈನಲ್‌ ಸೆಟ್ಲ್‌ಮೆಂಟ್‌ ಆದಮೇಲೆ ಹೋದವರು ಅನರ್ಹರು. ಅವರ ಟೀಕೆಗಳಿಗೆ ಉತ್ತರಿಸಬೇಕಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜನರು ಸ್ವಚ್ಚ ರಾಜಕಾರಣ ಬಯಸುತ್ತಿದ್ದಾರೆ. ಅನರ್ಹರನ್ನು ಸೋಲಿಸಲಿದ್ದಾರೆ. ಅಧಿಕಾರ ಹಿಡಿಯಲು ಏನೆಲ್ಲ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇರುವ ಬಿಜೆಪಿಯವರ ಆಡಿಯೊ, ವಿಡಿಯೊಗಳನ್ನು ನೋಡಿದ್ದೇವೆ. ಬಿಜೆಪಿಗೆ ಅಧಿಕಾರ ಮುಖ್ಯ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ ಎಂಬುದು ಜನರಿಗೂ ಗೊತ್ತಾಗಿದೆ ಎಂದು ತಿಳಿಸಿದರು.

ADVERTISEMENT

‘ಅನರ್ಹರು ಪಕ್ಷ ಬಿಟ್ಟು ಹೋಗಿರುವುದರಿಂದ ನಮ್ಮ ಪಕ್ಷ ಶುದ್ಧೀಕರಣಗೊಂಡಿದೆ. ಇದರಿಂದ ಪಕ್ಷದಲ್ಲಿ ಭಾರ ಕಡಿಮೆಯಾಗಿದೆ. ಬಿಜೆಪಿಗೆ ಭಾರ ಜಾಸ್ತಿಯಾಗಿದೆ’ ಎಂದರು.

ಜಾತಿ ಹೆಸರಲ್ಲಿ ಮತ ಬಿ.ಎಸ್‌. ಯಡಿಯೂರಪ್ಪ ಮತ ಕೇಳಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅನರ್ಹರನ್ನು ಗೆಲ್ಲಿಸಿದರೆ ಮಂತ್ರಿ ಮಾಡಲಾಗುವುದು ಎಂದು ಮತದಾರರ ಮುಂದೆ ಆಮಿಷ ಒಡ್ಡುತಿದ್ದಾರೆ. ಇವೆಲ್ಲದರೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ ಆಯೋಗ ಏನೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದೆ ಯಾರು ಮುಖ್ಯಮಂತ್ರಿಯಾಗುತ್ತಾರೆ, ಉಪಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಬಗ್ಗೆ ಈಗ ಯೋಚಿಸಿಲ್ಲ. ಈ ಸರ್ಕಾರವನ್ನು ಕಿತ್ತೊಗೆಯುವುದಷ್ಟೇ ಸದ್ಯದ ಗುರಿಯಾಗಿದೆ. ಆಪರೇಶನ್‌ ಕಮಲಕ್ಕಾಗಿ ವೆಚ್ಚ ಮಾಡಿದ ಹಣವನ್ನು ತುಂಬಿಸಿಕೊಳ್ಳಲು, ಉಪ ಚುನಾವಣೆಯ ಖರ್ಚನ್ನು ಬರಿಸಲು ಆಡಳಿತವನ್ನು ಬಳಸಿಕೊಳ್ಳುವುದು ಬಿಟ್ಟರೆ ಬೇರೇನನ್ನೂ ಈ ಸರ್ಕಾರ ಮಾಡಿಲ್ಲ. ಆಡಳಿತ ಸತ್ತೋಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರಿಗೆ ದೇಶ ನಡೆಸಲು ಬರೋದಿಲ್ಲ. ಜಿಡಿಪಿ ಕುಸಿದು, ರೂಪಾಯಿ ಮೌಲ್ಯ ಕುಸಿದಿದೆ. ಮೂರ್ಖತನದ ಆರ್ಥಿಕ‌ ನೀತಿಯಿಂದ ಜನ ಉದ್ಯೋಗ, ವ್ಯವಹಾರ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದರು.

ಹನಿಟ್ರ್ಯಾಪ್‌ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರೇ ಅಧಿಕ ಮಂದಿ ಕಾಣಿಸಿಕೊಂಡಿದ್ದಾರೆ. ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲದ ಕಾರಣ, ಅವರ ತೀರ ವೈಯಕ್ತಿಕ ವಿಚಾರವೂ ಆಗಿರುವುದರಿಂದ ಈ ಬಗ್ಗೆ ಮಾತನಾಡುವುದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.