ADVERTISEMENT

ದಾವಣಗೆರೆ: ಅಗ್ನಿಪಥ್ ಯೋಜನೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 7:08 IST
Last Updated 25 ಜೂನ್ 2022, 7:08 IST
ಆಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಹೋರಾಟ ಜಿಲ್ಲಾ ಸಮಿತಿಯಿಂದ ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಆಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಹೋರಾಟ ಜಿಲ್ಲಾ ಸಮಿತಿಯಿಂದ ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.   

ದಾವಣಗೆರೆ: ಆಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಹೋರಾಟ ಜಿಲ್ಲಾ ಸಮಿತಿಯಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಎಐಕೆಎಸ್‌, ಕರ್ನಾಟಕ ಜನಶಕ್ತಿ, ಎಐಕೆಕೆಎಂಎಸ್, ಎಐಡಿವೈಒ ಸಂಘಟನೆಗಳ ಸದಸ್ಯರು ಕೇಂದ್ರದ ವಿರುದ್ಧ ಘೋಷಣೆ ಕೂಗಿ ‘ಯುವಕರ ದಾರಿ ತಪ್ಪಿಸುವ ಯೋಜನೆ ಕೈಬಿಡಿ’, ‘ಗುತ್ತಿಗೆ ಆಧಾರಿತ ಕೆಲಸಗಳನ್ನು ಕೈಬಿಟ್ಟು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತುಂಬಬೇಕು’ ಎಂದು ಆಗ್ರಹಿಸಿದರು.

‘ಆಗ್ನಿಪಥ್ ಯೋಜನೆ ಯುವಕರ, ದೇಶ ವಿರೋಧಿಯಾಗಿದೆ. ಸೇನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಈ ಸೇನೆಯ ಹಿಂದಿದೆ. ಕಳೆದ 2 ವರ್ಷಗಳಲ್ಲಿ ಸೇನೆಗೆ ನೇಮಕಾತಿ ನಡೆದಿರುವುದು ಇದಕ್ಕೆ ಪುಷ್ಠಿ ನೀಡಿದೆ. ಆದ್ದರಿಂದ ಈ ಯೋಜನೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

‘ಈ ಯೋಜನೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ದೇಶದ ಜನರಿಗೆ ಅದರಲ್ಲೂ ಯುವಜನತೆಯ ಮೂಗಿಗೆ ತುಪ್ಪ ಸವರಿ ದಿಕ್ಕು ತಪ್ಪಿಸುವ ಯೋಜನೆಯಾಗಿದೆ. ಇದೇ ಕಾರಣಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯನ್ನು ಪ್ರಕಟಸುವ ಮುನ್ನ ಸಾಧಕ– ಬಾಧಕಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಬೇಕಿತ್ತು. ಆದರೆ ಕೇಂದ್ರದ ಸರ್ವಾಧಿಕಾರಿ ಧೋರಣೆಯಿಂದಾಗಿ ಏಕಮುಖವಾಗಿ ಯೋಜನೆಯನ್ನು ಪ್ರಕಟಿಸಿದೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್ ಆರೋಪಿಸಿದರು.

‘ಅಗ್ನಿಪಥ್ ಯೋಜನೆ ಹಾಸ್ಯಾಸ್ಪದವಾಗಿದ್ದು, ಇದು ಬಡವರನ್ನು ಹೊರ ಹಾಕಿ, ಶ್ರೀಮಂತರನ್ನು ತುಂಬುವ ಯೋಜನೆಯಾಗಿದೆ. ಕೂಡಲೇ ಇದನ್ನು ರದ್ದು ಮಾಡಬೇಕು’ ಎಂದು ರೈತ ಮುಖಂಡ ಹೊನ್ನೂರು ಮುನಿಯಪ್ಪ ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ನರೇಗಾ ರಂಗನಾಥ, ಸತೀಶ್ ಅರವಿಂದ್, ವಿ. ಲಕ್ಷ್ಮಣ, ಗುಲಾಬ್ ಜಾನ್, ಶಿರೀನಾ ಬಾನು, ಅನ್ವರ್, ಎ. ತಿಪ್ಪೇಶ್, ಹೊನ್ನೂರು ಮುನಿಯಪ್ಪ, ಟಿ.ಎಸ್. ನಾಗರಾಜ್, ಕೆ. ಶೇಖರಪ್ಪ, ಪರಶುರಾಮ್‌, ಆವರಗೆರೆ ವಾಸು, ಸರೋಜ, ನಾಗಜ್ಯೋತಿ, ಎಸ್.ಕೆ. ಆದಿಲ್ ಖಾನ್, ಐರಣಿ ಚಂದ್ರು, ಆವರಗೆರೆ ಚಂದ್ರು, ಶಿವಕುಮಾರ್ ಡಿ.ಶೆಟ್ಟರ್, ಸುನೀತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.