ADVERTISEMENT

ಅತ್ಯಾಚಾರ ನಡೆಸಿ ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:48 IST
Last Updated 19 ಏಪ್ರಿಲ್ 2019, 19:48 IST
ರಾಯಚೂರು ಜಿಲ್ಲೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾದ ಪ್ರಕರಣ ಖಂಡಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್‌ ಕಾರ್ಯಕರ್ತರು ದಾವಣಗೆರೆಯಲ್ಲಿ ಶುಕ್ರವಾರ ಪ್ರತಿಭಟಿಸಿದರು
ರಾಯಚೂರು ಜಿಲ್ಲೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾದ ಪ್ರಕರಣ ಖಂಡಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್‌ ಕಾರ್ಯಕರ್ತರು ದಾವಣಗೆರೆಯಲ್ಲಿ ಶುಕ್ರವಾರ ಪ್ರತಿಭಟಿಸಿದರು   

ದಾವಣಗೆರೆ: ರಾಯಚೂರು ಜಿಲ್ಲೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿರುವ ಪ್ರಕರಣವನ್ನು ಖಂಡಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್‌ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ನಗರದ ಜಯದೇವ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಅತ್ಯಾಚಾರ ಖಂಡಿಸುವ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಘಟನೆಯನ್ನು ಮರೆಮಾಚಲು ಪಿತೂರಿ ನಡೆದಿತ್ತು. ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸ್ವಾತಂತ್ರ್ಯ ಬಂದ 72 ವರ್ಷಗಳಾದರೂ ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣ, ಈಚೆಗೆ ಕಕ್ಕರಗೊಳ್ಳದಲ್ಲಿ ನಡೆದ ಪ್ರಕರಣಗಳು ದೇಶದ ರಾಜಕೀಯ ಪಕ್ಷಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ಎಂದು ದೂರಿದರು.

ಮಾಧ್ಯಮಗಳು, ಅಶ್ಲೀಲ ಸಿನಿಮಾ ಸಾಹಿತ್ಯಗಳು, ಕಾಮ-ಕ್ರೋಧ ಬೆಳೆಸುವ ಚಲನಚಿತ್ರಗಳು ಹೆಚ್ಚಾಗಿ ವಿದ್ಯಾರ್ಥಿಗಳ–ಯುವಜನರ ನೈತಿಕ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತಿವೆ. ಚುನಾವಣೆ ಇರುವುದರಿಂದ ಈ ವಿಷಯ ಮಹತ್ವವನ್ನೇ ಪಡೆದುಕೊಂಡಿಲ್ಲ. ದೇಶದಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ. ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ನಿಷೇಧಿಸಬೇಕು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್‌ಒ ನಗರ ಗಟಕದ ಅಧ್ಯಕ್ಷೆ ಸೌಮ್ಯ, ಜಂಟಿ ಕಾರ್ಯದರ್ಶಿ ನಾಗಜ್ಯೋತಿ, ಎ.ಐ.ಡಿ.ವೈ.ಒ ಸಂಘಟನಾ ಕಾರ್ಯದರ್ಶಿ ಪರಶುರಾಮ್, ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಜ್ಯೋತಿ ಕುಕ್ಕುವಾಡ, ಕಾರ್ಯದರ್ಶಿ ಭಾರತಿ, ಸಂಘಟಕರಾದ ಪೂಜಾ, ವಸಂತ, ಭವಾನಿರಾವ್, ಕಾವ್ಯಾ, ಪುಷ್ಪಾ, ಸ್ವಪ್ನ ಮಂಜುನಾಥ್, ತ್ರಿವೇಣಿ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.