ADVERTISEMENT

ಭಗತ್‌ ಸಿಂಗ್‌ ಪಠ್ಯ ಕಡಿತ: ಎಐಡಿಎಸ್‌ಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 16:20 IST
Last Updated 18 ಮೇ 2022, 16:20 IST
10ನೇ ತರಗತಿಯ ಪಠ್ಯದಲ್ಲಿ ಭಗತ್‌ ಸಿಂಗ್‌ ಕುರಿತ ಪಾಠವನ್ನು ಕೈಬಿಟ್ಟಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ಎಐಡಿಎಸ್‌ಒ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.
10ನೇ ತರಗತಿಯ ಪಠ್ಯದಲ್ಲಿ ಭಗತ್‌ ಸಿಂಗ್‌ ಕುರಿತ ಪಾಠವನ್ನು ಕೈಬಿಟ್ಟಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ಎಐಡಿಎಸ್‌ಒ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.   

ದಾವಣಗೆರೆ: 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಭಗತ್‌ ಸಿಂಗ್‌ ಕುರಿತ ಪಾಠ ಹಾಗೂ ವಿವೇಕಾನಂದರ ಮಾನವತಾವಾದಿ ಚಿಂತನೆಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಎಐಡಿಎಸ್‌ಒ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟಿಸಿದರು.

ನಗರದ ರೈಲು ನಿಲ್ದಾಣದ ಎದುರಿನ ಭಗತ್‌ ಸಿಂಗ್‌ ಪುತ್ಥಳಿ ಎದುರು ಪ್ರತಿಭಟಿಸಿದ ಎಐಡಿಎಸ್‌ಒ ಕಾರ್ಯಕರ್ತರು, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ‘10ನೇ ತರಗತಿ ಪಠ್ಯಪುಸ್ತಕದಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಹಾಗೂ ವಿವೇಕಾನಂದರ ಮಾನವತಾವಾದಿ ಚಿಂತನೆಗಳನ್ನು ಕೈಬಿಟ್ಟಿರುವ ಸರ್ಕಾರದ ಕೃತ್ಯವು ನಿರ್ಲಜ್ಜತನದಿಂದ ಕೂಡಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಸರ್ಕಾರಕ್ಕೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂಬುದು ಸ್ಪಷ್ಟಪಡಿಸುತ್ತದೆ. ಸಾರಾ ಅಬೂಬಕರ್ ಅವರ ‘ಯುದ್ಧ’, ಎ.ಎನ್.ಮೂರ್ತಿ ಅವರ ‘ವ್ಯಾಘ್ರಗೀತೆ’ ಮುಂತಾದ ಮೌಲ್ಯಯುತ ಪಾಠಗಳನ್ನೂ ಕೈಬಿಡಲಾಗಿದೆ. ಸಮಾಜದಲ್ಲಿ ಸಾಂಸ್ಕೃತಿಕ ಅಧಃಪತನ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಹೆಚ್ಚು ಅವಶ್ಯವಾಗಿರುವ ಚಿಂತನೆಗಳನ್ನು ಕೈಬಿಟ್ಟಿರುವುದು ನಾಗರಿಕತೆಯ ಪ್ರಗತಿಗೆ ವಿರುದ್ಧವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಭಗತ್‌ ಸಿಂಗ್‌ ಅವರು ಬ್ರಿಟಿಷ್‌ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುತ್ತ 23ನೇ ವಯಸ್ಸಿನಲ್ಲೇ ಗಲ್ಲಿಗೇರಿದರು. ಹಸಿವು, ಬಡತನ ಮುಂತಾದ ಸಮಸ್ಯೆಗಳು ತೊಲಗಿ ಸಮಾನತೆಯ ಸಮಾಜ ಉದಯಿಸಬೇಕು ಎಂಬುದು ಅವರ ಕನಸಾಗಿತ್ತು. ಇಂದು ಎಲ್ಲೆಡೆ ಅಸಮಾನತೆ, ಶೋಷಣೆ ದಾರಿದ್ರ್ಯ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳಿಗೆ ಭಗತ್‌ ಸಿಂಗ್‌ ವಿಚಾರ ದೊರಕಿದರೆ ಎಲ್ಲೆಡೆ ಹೋರಾಟದ ಕಹಳೆ ಮೊಳಗುತ್ತದೆ ಎಂಬ ಭಯದಿಂದ ಸರ್ಕಾರ ವಿದ್ಯಾರ್ಥಿಗಳಿಂದ ಭಗತ್‌ ಸಿಂಗ್‌ರನ್ನು ದೂರ ಮಾಡುತ್ತಿದೆ’ ಎಂದು ದೂರಿದರು.

‘ಭಗತ್‌ ಸಿಂಗ್‌ ಪಠ್ಯಕ್ಕೆ ಪ್ರತಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೆ, ಕೊನೆಯವರೆಗೂ ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸುತ್ತ ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದ ಆರ್‌.ಎಸ್‌.ಎಸ್‌. ಸ್ಥಾಪಕ ಹೆಗ್ಡೇವಾರ್‌ ಭಾಷಣವನ್ನು ಪಠ್ಯಕ್ಕೆ ಸೇರಿಸಲಾಗಿದೆ. ಈ ಸಂಕುಚಿತ ವಿಚಾರಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತವೆ’ ಎಂದು ಅಭಿಪ್ರಾಯಪಟ್ಟರು.

ಭಗತ್‌ ಸಿಂಗ್‌ ಹಾಗೂ ವಿವೇಕಾನಂದರ ವಿಚಾರಗಳನ್ನು ಪಠ್ಯಕ್ಕೆ ಮರಳಿ ಸೇರಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಕಚೇರಿ ಕಾರ್ಯದರ್ಶಿ ಕಾವ್ಯ ಬಿ., ಸೆಕ್ರೆಟರಿಯೇಟ್‌ ಸದಸ್ಯರಾದ ಪುಷ್ಪ ಜಿ., ಸುಮನ್ ಟಿ.ಎಸ್., ಅಭಿಷೇಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಧನುಷಾ, ಅನುಪ್ರಜ್ಞಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.