ADVERTISEMENT

‘108’ ಆಂಬುಲೆನ್ಸ್‌ ಕೊರತೆ: ತುರ್ತು ಸೇವೆ ವಿಳಂಬ

19 ಆಂಬುಲೆನ್ಸ್‌ಗಳ ಪೈಕಿ ಕೆಟ್ಟು ನಿಂತ 2 ವಾಹನ; ಗ್ರಾಮೀಣ ಭಾಗದಲ್ಲಿ ಸಮಸ್ಯೆ ತೀವ್ರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:10 IST
Last Updated 24 ಜುಲೈ 2025, 3:10 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ‘ಆರೋಗ್ಯ ಕವಚ– 108 ಆಂಬುಲೆನ್ಸ್’  ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ‘ಆರೋಗ್ಯ ಕವಚ– 108 ಆಂಬುಲೆನ್ಸ್’  ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ತುರ್ತು ಸಂದರ್ಭಗಳಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅವಶ್ಯವಿರುವ ‘ಆರೋಗ್ಯ ಕವಚ–108’ ಆಂಬುಲೆನ್ಸ್‌ಗಳ ಕೊರತೆಯು ಜಿಲ್ಲೆಯಲ್ಲಿ ತೀವ್ರವಾಗಿ ಕಾಡುತ್ತಿದೆ. ಸದ್ಯ ಖಾಸಗಿ ಏಜೆನ್ಸಿ ನಿರ್ವಹಿಸುತ್ತಿರುವ ‘108 ಆಂಬುಲೆನ್ಸ್‌’ಗಳಿಗೆ ಸಮರ್ಪಕವಾದ ನಿರ್ವಹಣೆ ಕೊರತೆಯೂ ಎದುರಾಗಿದೆ.

ಜಿಲ್ಲೆಯಲ್ಲಿ ‘ಆರೋಗ್ಯ ಕವಚ–108’ ಯೋಜನೆಯ ಒಟ್ಟು 19 ಆಂಬುಲೆನ್ಸ್‌ ವಾಹನಗಳಿವೆ. ಈ ಪೈಕಿ 2 ಆಂಬುಲೆನ್ಸ್‌ಗಳು ದುರಸ್ತಿಯಾಗದ ಸ್ಥಿತಿಯಲ್ಲಿ ಕೆಟ್ಟು ನಿಂತಿದ್ದು, ಸೇವೆ ಸ್ಥಗಿತಗೊಳಿಸಿವೆ. 17 ಆಂಬುಲೆನ್ಸ್‌ಗಳು ಸೇವೆಯಲ್ಲಿವೆ. ಈ ಪೈಕಿ ಒಂದೆರೆಡು ಆಂಬುಲೆನ್ಸ್‌ಗಳು ಆಗಾಗ ಕೆಟ್ಟು ನಿಂತು, ದುರಸ್ತಿ ಕಾಣುತ್ತಿವೆ.  

10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ 15 ರಿಂದ 20 ನಿಮಿಷಗಳಲ್ಲಿ ಆಂಬುಲೆನ್ಸ್ ಸೇವೆ ನೀಡಬೇಕಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ಗೆ ಕರೆ ಮಾಡಿದರೆ, ಸಮೀಪದ ಆಸ್ಪತ್ರೆಗಳಲ್ಲಿನ ಆಂಬುಲೆನ್ಸ್‌ಗಳ ಸೇವೆಯು ಶೀಘ್ರವಾಗಿ ದೊರಕುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ADVERTISEMENT

‘ಇಲ್ಲಿನ ಆಂಬುಲೆನ್ಸ್‌ ಬೇರೆಡೆ ಹೋಗಿದೆ, ಬರುವುದು ತಡವಾಗುತ್ತದೆ’ ಎಂಬ ಉತ್ತರ ಸಹಜವಾಗಿದೆ. ವಾಹನಗಳು ಕಡಿಮೆ ಇರುವ ಕಾರಣ ದೂರದ ಸ್ಥಳಗಳಿಂದ ಬೇರೊಂದು ಆಂಬುಲೆನ್ಸ್‌ ಕರೆಸುವುದು ಅನಿವಾರ್ಯವಾಗುತ್ತಿದೆ. 

‘ಬೇರೊಂದು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಯಿಂದ ಆಂಬುಲೆನ್ಸ್‌ ಬರುವುದು ತಡವಾಗುವ ಕಾರಣಕ್ಕೆ, ಆ ವೇಳೆಗಾಗಲೇ ರೋಗಿ ಅಥವಾ ಗಾಯಾಳುವಿನ ಸ್ಥಿತಿ ಗಂಭೀರವಾಗಿರುತ್ತದೆ. ಹಲವು ಸಂದರ್ಭಗಳಲ್ಲಿ ಆಂಬುಲೆನ್ಸ್‌ ಬರುವುದು ವಿಳಂಬವಾದರೆ ರೋಗಿಗಳು, ಗಾಯಾಳುಗಳು ಮಾರ್ಗಮಧ್ಯಯೇ ಮೃತಪಡುವ ಅಪಾಯವೂ ಇರುತ್ತದೆ’ ಎನ್ನುತ್ತಾರೆ ನ್ಯಾಮತಿಯ ಎಂ.ಎಸ್. ಜಗದೀಶ್. 

‘ಗ್ರಾಮೀಣ ಭಾಗದಲ್ಲಿ ಆಂಬುಲೆನ್ಸ್‌ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಮಳೆಗಾಲದಲ್ಲಿ ವಿದ್ಯುತ್‌ ಸ್ಪರ್ಶ, ವಿಷಜಂತುಗಳ ಕಡಿತ, ಸಿಡಿಲು ಬಡಿಯುವುದು ಸೇರಿದಂತೆ ಇನ್ನಿತರ ದುರ್ಘಟನೆಗಳು ಸಂಭವಿಸುವ ಪ್ರಮಾಣವೂ ಹೆಚ್ಚಾಗಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ಆಂಬುಲೆನ್ಸ್‌ ಸೇವೆ ಅಗತ್ಯವಾಗಿದೆ. ಆಂಬುಲೆನ್ಸ್‌ ತ್ವರಿತವಾಗಿ ತಲುಪಿದಷ್ಟು ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ಅವರು ಹೇಳುತ್ತಾರೆ.

‘ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಬಳಿಯ 108 ಆಂಬುಲೆನ್ಸ್‌ ಕೆಟ್ಟು ನಿಂತಿದೆ, ತುರ್ತು ಕರೆ ಬಂದರೆ ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಪಿಎಚ್‌ಸಿ ಯಲ್ಲಿನ ಆಂಬುಲೆನ್ಸ್‌ ಅನ್ನು ಕರೆಸಲಾಗುತ್ತಿದೆ’ ಎಂದು ಬಸವಾಪಟ್ಟಣದ ಬಿ.ಹಾಲಪ್ಪ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯ ಬಳಿ ‘108’ ಆಂಬುಲೆನ್ಸ್‌ಗಳು ನಿಂತಿರುತ್ತವೆ. 108 ಜೊತೆಗೆ ತುರ್ತು ಸಹಾಯವಾಣಿ (ಇಆರ್‌ಎಸ್‌ಎಸ್‌) 112 ಗೆ ಕರೆ ಮಾಡುವ ಮೂಲಕ ಮೂಲಕವೂ ಆಂಬುಲೆನ್ಸ್ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೆಟ್ಟು ನಿಂತಿರುವ 108 ಆಂಬುಲೆನ್ಸ್‌

‘ಕನಿಷ್ಠ 6 ಆಂಬುಲೆನ್ಸ್‌ಗಳ ಅವಶ್ಯ’

‘ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಒಂದೇ ಆಂಬುಲೆನ್ಸ್‌ ಇದೆ. ಕರೆ ಬಂದ ಕೂಡಲೇ ಸಮೀಪದ ಆಸ್ಪತ್ರೆಯಲ್ಲಿನ ಆಂಬುಲೆನ್ಸ್‌ ರೋಗಿಯನ್ನು ಕರೆ ತರಲು ತೆರಳುತ್ತದೆ. ಅದೇ ಸಮಯದಲ್ಲಿ ಅದೇ ಭಾಗದಲ್ಲಿ ಮತ್ತೊಂದು ಕರೆ ಬಂದಾಗ ಸಮಸ್ಯೆ ಎದುರಾಗುತ್ತದೆ. ಆಗ ಅನಿವಾರ್ಯವಾಗಿ ಬೇರೆ ಪ್ರದೇಶದಿಂದ ಆಂಬುಲೆನ್ಸ್‌ ಕರೆಸಬೇಕಾಗುತ್ತದೆ. ಇದರಿಂದ ಕೆಲವು ಬಾರಿ ರೋಗಿಗಳಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕಿದೆ. ಜಿಲ್ಲೆಗೆ ಇನ್ನೂ ಕನಿಷ್ಠ 5ರಿಂದ 6 ಆಂಬುಲೆನ್ಸ್‌ಗಳ ಅವಶ್ಯಕತೆಯಿದೆ’ ಎಂದು ಆರೋಗ್ಯ ಕವಚ–108ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆಸ್ಪತ್ರೆಗಳಲ್ಲಿವೆ 24 ಆಂಬುಲೆನ್ಸ್‌ 

ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಆಂಬುಲೆನ್ಸ್‌ಗಳಿವೆ. ಈ ಪೈಕಿ 1 ಆಂಬುಲೆನ್ಸ್ ಹಾಳಾಗಿದ್ದು ಗ್ಯಾರೇಜ್ ಸೇರಿದೆ. 6 ಆಂಬುಲೆನ್ಸ್‌ಗಳು ‘ನಗು ಮಗು’ ಯೋಜನೆಯ ಸೇವೆಯಲ್ಲಿವೆ. ಇನ್ನುಳಿದ 17 ಆಂಬುಲೆನ್ಸ್‌ಗಳು ರೋಗಿಗಳಿಗೆ ಸೇವೆ ಒದಗಿಸುತ್ತಿವೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿವೆ. ‘ನವೆಂಬರ್‌ ವೇಳೆಗೆ ಆರೋಗ್ಯ ಕವಚ –108 ಆಂಬುಲೆನ್ಸ್‌ಗಳನ್ನೂ ಆರೋಗ್ಯ ಇಲಾಖೆಯ ಸುಪರ್ದಿಗೆ ವಹಿಸುವುದರಿಂದ ಆಂಬುಲೆನ್ಸ್‌ಗಳ ಕೊರತೆ ಸಮಸ್ಯೆ ಬಗೆಹರಿಯಲಿದೆ. ಆಗ ರೋಗಿಗಳು ಗಾಯಾಳುಗಳಿಗೆ ಆದಷ್ಟು ಶೀಘ್ರವೇ ಆಂಬುಲೆನ್ಸ್ ಸೇವೆ ದೊರೆಯಲಿದೆ’ ಎಂದು ಡಿಎಚ್‌ಒ ಕಚೇರಿಯ ಸರ್ವಿಸ್ ಎಂಜಿನಿಯರ್ ಮಲ್ಲಪ್ಪ ವೈ.ಕೆ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.