ADVERTISEMENT

ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಭಾಯಾಗಡ್‌ ಕ್ಷೇತ್ರದಲ್ಲಿ ನಡೆದ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:29 IST
Last Updated 16 ಜುಲೈ 2021, 6:29 IST
ನ್ಯಾಮತಿಯ ಭಾಯಾಗಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು.
ನ್ಯಾಮತಿಯ ಭಾಯಾಗಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು.   

ಹೊನ್ನಾಳಿ: ‘ವಿಧಾನಸೌಧದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಿ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಲಂಬಾಣಿ ಸಮಾಜದ ಪರ ನನ್ನ ಧ್ವನಿ ಸದಾ ಇರುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸಂತ ಸೇವಾಲಾಲ್‌ ಅವರ ಭಾಯಾಗಡ್ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರು.

‘ನಾನು ಲಂಬಾಣಿ ಸಮುದಾಯದ ಜೊತೆಗೆ ಬೆಳೆದವನು. ಸಮುದಾಯದ ಎಲ್ಲಾ ಸಮಸ್ಯೆಗಳನ್ನು ಅರ್ಥ ಮಾಡಿ
ಕೊಂಡಿದ್ದೇನೆ. ಸಮಾಜದವರು ಉತ್ತಮ ಬದುಕು ರೂಪಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ರಾಜಕೀಯ ಕಾರಣದಿಂದ ನಾನು ಇಲ್ಲಿಗೆ ಬಂದಿಲ್ಲ. ಸಮುದಾಯದವರೊಂದಿಗೆ ಸಂವಾದ ಮಾಡಲು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಆಗ ವಿವಿಧ ಸಮುದಾಯಗಳ ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಶಿವಕುಮಾರ್‌ ಹೇಳಿದರು.

‘ವಿವಿಧ ಕುಲ ಕಸಬು ಮಾಡುವವರೊಂದಿಗೂ ಸಂವಾದ ಮಾಡುತ್ತೇನೆ. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಕೆಳ ವರ್ಗದ ಸಮಾಜದ ಸಂಕಷ್ಟಗಳು ನಮಗೆ ಅರಿವಾಗುತ್ತವೆ’ ಎಂದು ಹೇಳಿದರು.

ಗುಳೆ ಸಮಸ್ಯೆ, ಬಗರ್‌ಹುಕುಂ ಸಾಗುವಳಿದಾದರ ಸಮಸ್ಯೆ, ಸದಾಶಿವ ಆಯೋಗದ ವರದಿ, ಲಂಬಾಣಿ ಜನಾಂಗದ ಮಹಿಳೆಯರಲ್ಲಿ ಗರ್ಭ
ಕೋಶದ ಕ್ಯಾನ್ಸರ್ ಸೇರಿ ಇತರ ಅಂಶಗಳ ಬಗ್ಗೆ ಸಮಾಜದ ಯುವಕ, ಯುವತಿಯರು ಹಾಗೂ ಮುಖಂಡರು ಸಂವಾದದಲ್ಲಿ ಪ್ರಶ್ನೆ ಮಾಡಿದರು.

ಅಂತರ ಮಾಯ: ಕಾರ್ಯಕ್ರಮದಲ್ಲಿ ಯಾರೂ ಅಂತರ ಕಾಯ್ದುಕೊಂಡಿರಲಿಲ್ಲ. ಮುಖಂಡರು, ಕಾರ್ಯಕರ್ತರು ಸಾಗರೋಪಾದಿಯಲ್ಲಿ ವೇದಿಕೆ ಸಮೀಪ ಬಂದು ಡಿ.ಕೆ. ಶಿವಕುಮಾರ್‌ ಅವರಿಗೆ ಹೂವಿನ ಹಾರ ಹಾಕಲು ಮುಗಿಬಿದ್ದರು.

ಮಹಾಮಠ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಮಾಜಿ ಸಚಿವ ಬಾಬುರಾವ್‍ ಚವ್ಹಾಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಶಿವಮೂರ್ತಿನಾಯ್ಕ, ಶ್ರೀನಿವಾಸ್, ಸಮಿತಿ ಪ್ರಧಾನ ಕಾರ್ಯ
ದರ್ಶಿ ರಾಘವೇಂದ್ರನಾಯ್ಕ, ಉಪಾಧ್ಯಕ್ಷ ಡಾ.ಎಲ್. ಈಶ್ವರನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.