ADVERTISEMENT

ಪ್ರಶ್ನಿಸುವ ಮನೋಭಾವದಿಂದ ಅನ್ವೇಷಕ ಪ್ರವೃತ್ತಿ

ಭಾಭಾ ಅಣು ಸಂಶೋದನಾ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಡಿ.ವಿ. ಗೋಪಿನಾಥ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 14:16 IST
Last Updated 13 ಡಿಸೆಂಬರ್ 2019, 14:16 IST
ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 13ನೇ ವಿಜ್ಞಾನ ವಿಚಾರಸಂಕಿರಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ ರುದ್ರಪ್ಪ ಪರಸ್ಪರ ಚರ್ಚಿಸಿದರು. ವಿಜ್ಞಾನ ಶಿಕ್ಷಕ ಶ್ರೀಧರಮಯ್ಯ ಎಂ.ಎನ್., ಪ್ರಾಂಶುಪಾಲ ಪದ್ಮನಾಭ ಜೆ., ಭಾಭಾ ಅಣು ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಡಿ.ವಿ. ಗೋಪಿನಾಥ್, ಪ್ರಾಧ್ಯಾಪಕ ಡಾ. ಬಿ. ಇ. ರಂಗಸ್ವಾಮಿ ಇದ್ದರು.
ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 13ನೇ ವಿಜ್ಞಾನ ವಿಚಾರಸಂಕಿರಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ ರುದ್ರಪ್ಪ ಪರಸ್ಪರ ಚರ್ಚಿಸಿದರು. ವಿಜ್ಞಾನ ಶಿಕ್ಷಕ ಶ್ರೀಧರಮಯ್ಯ ಎಂ.ಎನ್., ಪ್ರಾಂಶುಪಾಲ ಪದ್ಮನಾಭ ಜೆ., ಭಾಭಾ ಅಣು ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಡಿ.ವಿ. ಗೋಪಿನಾಥ್, ಪ್ರಾಧ್ಯಾಪಕ ಡಾ. ಬಿ. ಇ. ರಂಗಸ್ವಾಮಿ ಇದ್ದರು.   

ದಾವಣಗೆರೆ: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆ ಮಾಡುವುದರಿಂದ ಅನ್ವೇಷಕ ಪ್ರವೃತ್ತಿ ಹೆಚ್ಚುತ್ತದೆ ಎಂದು ಮುಂಬೈನ ಭಾಭಾ ಅಣು ಸಂಶೋದನಾ ಕೇಂದ್ರದ ಆರೋಗ್ಯ, ಪರಿಸರ ಸುರಕ್ಷತಾ ಹಾಗೂ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ. ಗೋಪಿನಾಥ್‌ ಹೇಳಿದರು.

ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಆಯೋಜಿಸಿದ್ದ 13 ನೇ ವಿಜ್ಞಾನ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಯಾವುದೇ ವಸ್ತು ಹೇಗಿದೆ ಎನ್ನುವುದು ಜ್ಞಾನ. ಅದು ಏಕೆ ಹೀಗಿದೆ ಎನ್ನುವುದು ವಿಜ್ಞಾನ. ಒಂದು ದೇಶದ ಅಭಿವೃದ್ಧಿಗೆ ಶಿಕ್ಷಣ ಹಾಗೂ ವಿಜ್ಞಾನ ಅಗತ್ಯ. ಮುಂದುವರಿದ ದೇಶಗಳಲ್ಲಿ ವೈಜ್ಞಾನಿಕ ಮನೋಭಾವ, ಆಸಕ್ತಿಯ ಕಾರಣ ಅವು ಅಭಿವೃದ್ಧಿ ಸಾಧಿಸಿವೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ವಿಚಾರಸಂಕಿರಣಗಳು ಸಹಕಾರಿ. ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಾಗೂ ಅದರಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್‌, ‘ನಮಗೆ ನಮ್ಮ ತಂದೆ, ತಾಯಿ, ನಮ್ಮ ಸುತ್ತಲಿರುವವರು ಪ್ರೇರಕರಾಗಬೇಕು. ವಿದ್ಯಾರ್ಥಿಗಳು ನಮ್ಮ ಸುತ್ತಲಿನ ವಾತಾವರಣದಿಂದ ಪ್ರಭಾವಿತರಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬ ಮಗುವಿನಲ್ಲಿ ವಿಜ್ಞಾನಿಯಾಗಬೇಕೆಂಬ ಕುತೂಹಲ ಇರುತ್ತದೆ. ತರಗತಿಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸಲು ಮುಂದಾಗಬೇಕು. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಹಲವರು ನಮಗೆ ಪ್ರೇರಣೆಯಾಗಬೇಕು’ ಎಂದು ಹೇಳಿದರು.

ಬಿಐಇಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಇ. ರಂಗಸ್ವಾಮಿ, ‘ಕುತೂಹಲ ಇದ್ದರೆ ಏನನ್ನಾದರೂ ಸಾಧಿಸಬಹುದು. ಆಸಕ್ತಿ ಕಳೆದುಹೋಗದಂತೆ ನೋಡಿಕೊಳ್ಳಿ. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ದೇಶ ಸೂಪರ್‌ ಪವರ್‌ ಆಗಲು ಸಾಧ್ಯ. ಜೀವನದಲ್ಲಿ ಸೃಜನಶೀಲತೆ, ಕುತೂಹಲ ಮುಖ್ಯ. ಸಂವಹನ ಕೌಶಲ, ನಾಯಕತ್ವ ಗುಣ ಬೆಳೆಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಡಾ. ಕವಿತಾ ಆರ್‌.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಪೂಜಿ ಪ್ರೌಢಶಾಲೆಯ ಪದ್ಮನಾಭ್‌ ಜೆ., ಶ್ರೀಧರಮಯ್ಯ ಎಂ.ಎನ್‌. ಇದ್ದರು.

ಉಪನ್ಯಾಸಕರಾದ ಶಿವಶಂಕರ್‌ ಕೆ.ಸಿ. ನಿರೂಪಿಸಿದರು. ಡಿ.ಎಂ.ಮರುಳಸಿದ್ಧಪ್ಪ ಸ್ವಾಗತಿಸಿದರು. ಬಿ.ಎಂ. ಶಿವಕುಮಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.