ಕಡರನಾಯ್ಕನಹಳ್ಳಿ: ಸಮೀಪದ ಯಲವಟ್ಟಿ ಗ್ರಾಮದ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಮಂಗಳವಾದ್ಯಗಳೊಂದಿಗೆ ಆಂಜನೇಯಸ್ವಾಮಿಯ ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಡೆಯಿತು. ನಂತರ ಜಿಗಳಿ ರಂಗನಾಥಸ್ವಾಮಿ ಉತ್ಸವಮೂರ್ತಿಯೊಂದಿಗೆ ರಥಾರೋಹಣ ಮಾಡಲಾಯಿತು. ಬಲಿದಾನ ಹಾಗೂ ಹೂಮಾಲೆ, ಧ್ಜಜ ಪತಾಕೆ ಹರಾಜು ಮಾಡಿದ ನಂತರ ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಕಳಸಕ್ಕೆ ಬಾಳೆಹಣ್ಣು ಸಮರ್ಪಿಸಿದರು. ‘ರಾಮ ರಾಮ ಗೋವಿಂದ’ ಎನ್ನುತ್ತಾ ಭಕ್ತರು ರಥ ಎಳೆದರು. ಡೊಳ್ಳು, ನಾಸಿಕ್ ಡೋಲು, ತಮಟೆ ಮೇಳ, ಉತ್ಸವಕ್ಕೆ ಕಳೆ ತಂದವು.
ರಾಜಬೀದಿ, ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಎಲ್ಲಾ ಮನೆಗಳು ವಿದ್ಯುತ್ ದೀಪ, ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು.
ರಥೋತ್ಸವದ ಪ್ರಯುಕ್ತ ಆಂಜನೇಯಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾಲಂಕಾರ ಮಾಡಲಾಗಿತ್ತು. ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ರಥೋತ್ಸವದ ಪ್ರಯುಕ್ತ ಗೋಧೂಳಿ ಲಗ್ನದಲ್ಲಿ ಮುಳ್ಳು ಗದ್ದುಗೆ ಉತ್ಸವ ನಡೆಯಿತು. ಹರಕೆ ಹೊತ್ತ ಭಕ್ತರು ಮುಳ್ಳು ಗದ್ದುಗೆ ಮೇಲೆ ಸಾಗಿ ಬಂದರು. ನಂತರ ಯುವಕರು, ಮಕ್ಕಳು ಓಕುಳಿ ಆಡಿದರು. ನಂತರ ಭೂತನ ಸೇವೆ ನಡೆಯಿತು.
ರಥೋತ್ಸವ ಅಂಗವಾಗಿ ಮುಖ್ಯ ಬೀದಿಯಲ್ಲಿ ಆಟಿಕೆ ಸಾಮಾನು, ಬೆಂಡು–ಬತ್ತಾಸು ಮಾರುವ ಅಂಗಡಿಗಳು ಇದ್ದವು. ದೇವಾಲಯ ಸಮಿತಿ ಪದಾಧಿಕಾರಿಗಳು, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.