ADVERTISEMENT

ದೇವದಾಸಿಯರಿಗೆ ಸಮಗ್ರ ಪ್ಯಾಕೇಜ್ ಘೋಷಿಸಿ

ಹಿರಿಯ ವಕೀಲ ಎಲ್.ಎಚ್. ಅರುಣ್‍ಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:33 IST
Last Updated 9 ಅಕ್ಟೋಬರ್ 2021, 16:33 IST
ದಾವಣಗೆರೆಯ ಮಹಾನಗರಪಾಲಿಕೆ ಆವರಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಜನ ಜಾಗೃತಿ ಕಲಾ ಜಾಥಾ ಸಮಾರೋಪ ಕಾರ್ಯಕ್ರಮವನ್ನು ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಉದ್ಘಾಟಿಸಿದರು.
ದಾವಣಗೆರೆಯ ಮಹಾನಗರಪಾಲಿಕೆ ಆವರಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಜನ ಜಾಗೃತಿ ಕಲಾ ಜಾಥಾ ಸಮಾರೋಪ ಕಾರ್ಯಕ್ರಮವನ್ನು ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಉದ್ಘಾಟಿಸಿದರು.   

ದಾವಣಗೆರೆ: ದೇವದಾಸಿ ಪದ್ಧತಿ ನಿಷೇಧಿಸಿ 1982ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ದೇವದಾಸಿ ಪದ್ಧತಿಯನ್ನು ತಡೆಯಲು ಆಗಿಲ್ಲ ಎಂದು ಹಿರಿಯ ವಕೀಲ ಎಲ್.ಎಚ್. ಅರುಣ್‍ಕುಮಾರ್ ವಿಷಾದ ವ್ಯಕ್ತಪಡಿಸಿದರು.

ವಿಮುಕ್ತ ದೇವದಾಸಿ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ, ಬದುಕುವ ಹಕ್ಕು ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ನೀಡುವ ಸಮಗ್ರ ಕಾಯ್ದೆಗೆ ಒತ್ತಾಯಿಸಿ ಇಲ್ಲಿನ ಮಹಾನಗರಪಾಲಿಕೆ ಆವರಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಜನ ಜಾಗೃತಿ ಕಲಾ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವದಾಸಿ ಪದ್ಧತಿ ಆಚರಣೆಯಿಂದ ಜನ್ಮ ತಾಳಿರುವ ಎಲ್ಲ ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ ನೂತನ ಕಾನೂನು ಅಗತ್ಯವಿದ್ದು, ಆ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಯಲದ ಪರಿಣಿತರಿಂದ ರೂಪಿಸಿರುವ ಸಮಗ್ರ ಕರಡು ಮಸೂದೆಯನ್ನು ಸರ್ಕಾರ ಪರಿಗಣಿಸಬೇಕು’ ಎಂದು ಹೇಳಿದರು.

ADVERTISEMENT

‘ದೇವದಾಸಿ ಪದ್ದತಿ ನಿರ್ಮೂಲನೆ, ಪುನರ್ವಸತಿ ಮತ್ತು ದೇವದಾಸಿಯರ ಸಮೀಕ್ಷೆ ನಡೆಸುವ ಮೂಲಕ ಮಾಶಾಸನ ದೊರೆಯುವಂತೆ ಮಾಡಲು ಸರ್ಕಾರ ಕಾರ್ಯನ್ಮುಖವಾಗಬೇಕು’ ಎಂದು ಆಗ್ರಹಿಸಿದರು.

ಪಿಯುಸಿಎಲ್ ಕರ್ನಾಟಕದ ಪ್ರೊ.ವೈ.ಜೆ. ರಾಜೇಂದ್ರ ಮಾತನಾಡಿ, ‘ಬದುಕಿರುವ ಮಾಜಿ ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳ ಬದುಕುವ ಹಕ್ಕಿನ ಮೂಲಭೂತ ಪ್ರಶ್ನೆಗೆ ಸರ್ಕಾರ ಸೇರಿ ನಾಗರೀಕ ಸಮಾಜ ಉತ್ತರ ನೀಡಬೇಕಿದೆ. ಕಲಾ ಜಾಥಾದ ಮೂಲಕ ದೇವದಾಸಿಯರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ವಿಮುಕ್ತ ಮಹಿಳಾ ದೇವದಾಸಿ ವೇದಿಕೆಯ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.

ಕಲಾ ಜಾಥಾದ ಸಂಚಾಲಕ ಚಂದಾಲಿಂಗ ಕಲಾಲ್ಬಂಡಿ ಮಾತನಾಡಿ, ‘ಸರ್ಕಾರ ವಿಶೇಷ ಪ್ಯಾಕೇಜ್ ನಿಡುವ ಮೂಲಕ ದೇವದಾಸಿ ತಾಯಂದಿರು ಮತ್ತು ಅವರ ಕುಟುಂಬದ ಮಕ್ಕಳ ತಮ್ಮ ಭವಿಷ್ಯದ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

ಕಾರ್ಯಕ್ರದಲ್ಲಿ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ, ಎ. ನರಸಿಂಹಮೂರ್ತಿ ರಂಗನಿರ್ದೇಶಕ ಎಂ.ಆರ್. ಭೇರಿ, ವಕೀಲರಾದ ಡಿ.ಎಸ್. ಬಾಬಣ್ಣ, ಅನಿಸ್‌ ಪಾಶ, ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್, ಸ್ಲಂ ಜನಾಂದೋಲನದ ಕರ್ನಾಟಕ ಜಿಲ್ಲಾ ಸಂಚಾಲಕರಾದ ರೇಣುಕಾ ಎಲ್ಲಮ್ಮ, ಶಬ್ಬೀರ್ ಸಾಬ್, ಸಾವಿತ್ರಮ್ಮ, ಪಡಿಯಮ್ಮ ಇದ್ದರು.

ಕಾರ್ಯಕ್ರಮದಲ್ಲಿ ಜಾಥಾದವರು ಪ್ರಸ್ತುತ ಪಡಿಸಿದ ‘ದೇವರಿಗೆ ಸವಾಲು’ ನಾಟಕ ಪ್ರದರ್ಶನ ಜನರ ಪ್ರಶಂಸೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.