ಪ್ರಾತಿನಿಧಿಕ ಚಿತ್ರ
ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆದಾಯದ ಮೂಲವಾದ ಮಾರುಕಟ್ಟೆ ಶುಲ್ಕ (ಸೆಸ್) ಪಾವತಿಗೆ ಆನ್‌ಲೈನ್ ವ್ಯವಸ್ಥೆ ರೂಪಿಸಿ ದಾವಣಗೆರೆಯಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಕೃಷಿ ಉತ್ಪನ್ನ ಮಾರಾಟ ಇಲಾಖೆ ಮುಂದಾಗಿದೆ.
ಡಿಜಿಟಲ್ ಶುಲ್ಕ ಪಾವತಿ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದ ಇತರೆ ಮಾರುಕಟ್ಟೆಯ ಖರೀದಿದಾರರು ಹಾಗೂ ಸಿಬ್ಬಂದಿಗೆ ತರಬೇತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳ ಖರೀದಿ ಹಾಗೂ ಸಾಗಣೆಗೆ ಪರವಾನಗಿ ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ.
ಕೃಷಿ ಉತ್ಪನ್ನಗಳನ್ನು ರೈತರಿಂದ ಖರೀದಿಸುವ ವರ್ತಕರು ಶೇ 0.60ರಷ್ಟು ಮಾರುಕಟ್ಟೆ ಶುಲ್ಕವನ್ನು ಎಪಿಎಂಸಿಗೆ ಪಾವತಿಸಬೇಕು. ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಆಧರಿಸಿ ಇದು ನಿರ್ಧಾರವಾಗುತ್ತದೆ. ಖರೀದಿದಾರರು ಎಪಿಎಂಸಿ ಕಚೇರಿಗೆ ತೆರಳಿ ಚೆಕ್, ಆರ್‌ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಪಾವತಿಸಬೇಕಿತ್ತು. 24 ಗಂಟೆಯ ಕಾಲಮಿತಿಯಲ್ಲಿ ಸೆಸ್ ಪಾವತಿಸದ ವರ್ತಕರಿಗೆ ಶೇ 12ರಿಂದ ಶೇ 30ರಷ್ಟು ದಂಡ ವಿಧಿಸಲಾಗುತ್ತಿತ್ತು. ದಂಡದ ಹೊರೆ ತಪ್ಪಿಸಲು ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸುವಂತೆ ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.
ವರ್ತಕರು ಖರೀದಿಸಿದ ಕೃಷಿ ಉತ್ಪನ್ನಗಳ ಸಾಗಣೆಗೆ ಎಪಿಎಂಸಿ ಪರವಾನಗಿ (ನಮೂನೆ 35 ಎ) ನೀಡುತ್ತದೆ. ಮಾರುಕಟ್ಟೆ ಶುಲ್ಕ ಪಾವತಿಸಿದ ಬಳಿಕವಷ್ಟೇ ಇದು ‘ರೆಮ್ಸ್’ ತಂತ್ರಾಂಶದಲ್ಲಿ ಲಭ್ಯವಾಗುತ್ತದೆ.
ಖರೀದಿ ಮಾಡಿದ ಉತ್ಪನ್ನಗಳ ಸಾಗಣೆಗೆ ಪರವಾನಗಿ ಪಡೆಯುವ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿತ್ತು. ಇಲಾಖೆಯ ಅಧಿಕಾರಿಗಳು ಹಾಗೂ ‘ರೆಮ್ಸ್’ ತಂತ್ರಾಂಶದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಅಧ್ಯಯನ ನಡೆಸಿ ಏಕೀಕೃತ ಡಿಜಿಟಲ್ ಪಾವತಿ ವ್ಯವಸ್ಥೆಗೆ ಶಿಫಾರಸು ಮಾಡಿತ್ತು. ಕಳೆದ ವರ್ಷದ ಡಿಸೆಂಬರ್ 11ರಂದು ದಾವಣಗೆರೆ ತಾಲ್ಲೂಕು ಹಾಗೂ ಜನವರಿ 6ರಂದು ಜಿಲ್ಲಾ ವ್ಯಾಪ್ತಿಯ ಎಪಿಎಂಸಿಗಳಲ್ಲಿ ಸೆಸ್ ಪಾವತಿಗೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
‘ಕೃಷಿ ಉತ್ಪನ್ನ ಖರೀದಿಸಿದ ವರ್ತಕರಿಗೆ ‘ರೆಮ್ಸ್’ ತಂತ್ರಾಂಶದಲ್ಲಿ ‘ಸೆಸ್’ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಕ್ಯೂಆರ್ ಕೋಡ್, ನೆಟ್ ಬ್ಯಾಂಕಿಂಗ್, ಯುಪಿಐ ಬಳಸಿ ಶುಲ್ಕ ಪಾವತಿಸಬಹುದಾಗಿದೆ. ವರ್ತಕರಿಗಾಗಿ ರೂಪಿಸಿದ ‘ಟ್ರೇಡರ್ಸ್ ಆ್ಯಪ್’ ಮೂಲಕವೂ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಉತ್ಪನ್ನಗಳ ಸಾಗಣೆಗೆ ಪರವಾನಗಿ ಕೂಡ ಸಕಾಲಕ್ಕೆ ಲಭ್ಯವಾಗುತ್ತಿದೆ’ ಎಂದು ದಾವಣಗೆರೆ ಎಪಿಎಂಸಿ ಸಹಾಯಕ ನಿರ್ದೇಶಕ ಜಿ. ಪ್ರಭು ತಿಳಿಸಿದರು.
‘ನಮೂನೆ 35 ಬಿ’ ರದ್ದತಿಗೆ ಒತ್ತಾಯ
‘ಮಾರುಕಟ್ಟೆ ಶುಲ್ಕ ಪಾವತಿಸಿದ ಖಚಿತತೆಗೆ ಎಪಿಎಂಸಿ ನೀಡುತ್ತಿದ್ದ ‘ನಮೂನೆ 35 ಬಿ’ ಪರವಾನಗಿಯು ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಿಕ ಮೌಲ್ಯ ಕಳೆದುಕೊಂಡಿದೆ. ಇದನ್ನು ರದ್ದುಪಡಿಸಿದರಷ್ಟೇ ವರ್ತಕರಿಗೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಎಪಿಎಂಸಿ ಮೆಕ್ಕೆಜೋಳ ವರ್ತಕರ ಸಂಘದ ಅಧ್ಯಕ್ಷ ಟಿ. ಶ್ರೀನಿವಾಸ್ ಒತ್ತಾಯಿಸಿದ್ದಾರೆ. ‘ರೈತರಿಂದ ಖರೀದಿಸಿದ ಉತ್ಪನ್ನಗಳ ಸಾಗಣೆಗೆ ನೀಡುತ್ತಿದ್ದ ‘ನಮೂನೆ 35 ಎ’ ಪರವಾನಗಿ ಪಡೆಯುವ ವ್ಯವಸ್ಥೆಯು ಸರಳೀಕರಣಗೊಂಡಿದೆ. ‘ನಮೂನೆ 35 ಬಿ’ ನೀಡುವವರೆಗೂ ಕಂಪನಿಗಳು ವರ್ತಕರಿಗೆ ಹಣ ಪಾವತಿಸುವುದಿಲ್ಲ. ಮಾರುಕಟ್ಟೆ ಶುಲ್ಕ ಪಾವತಿಸಿದ 15 ದಿನಗಳವರೆಗೆ ‘ನಮೂನೆ 35 ಬಿ’ಗೆ ಕಾಯಬೇಕಿದೆ. ವರ್ತಕರ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.