ADVERTISEMENT

ಒಂಬುಡ್ಸ್‌ಮನ್‌ಗೆ ಮೊರೆ: ಮರಳಿದ ಉದ್ಯೋಗ

ಪತಿಗೆ ಎಚ್‌ಐವಿ ದೃಢ, ಪತ್ನಿ ಉದ್ಯೋಗಕ್ಕೆ ಆಪತ್ತು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:11 IST
Last Updated 1 ಆಗಸ್ಟ್ 2024, 7:11 IST

ದಾವಣಗೆರೆ: ಪತಿಗೆ ಎಚ್‌ಐವಿ ದೃಢಪಟ್ಟ ಪರಿಣಾಮ ಸರ್ಕಾರಿ ಕಚೇರಿಯ ಹೊರಗುತ್ತಿಗೆ ನೌಕರಿಯಿಂದ ಬಿಡುಗಡೆಗೊಂಡಿದ್ದ ಮಹಿಳೆಯೊಬ್ಬರು ಎಚ್‌ಐವಿ ಏಡ್ಸ್‌ ಒಂಬುಡ್ಸ್‌ಮನ್‌ ಮೊರೆ ಹೋಗಿ ಮರಳಿ ಉದ್ಯೋಗ ದಕ್ಕಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಯೊಂದನ್ನು ದಾವಣಗೆರೆ ನಗರದಲ್ಲಿ ಅನುಷ್ಠಾನಗೊಳಿಸಲು ಕಾರ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಈ ಪ್ರಮಾದ ನಡೆದಿತ್ತು. ಹೊರಗುತ್ತಿಗೆ ಆಧಾರದ ಮೇರೆಗೆ ‘ಡಿ’ ದರ್ಜೆಯ ನೌಕರರಾಗಿ ಕೆಲಸಕ್ಕಿದ್ದು, ತಪ್ಪೇ ಮಾಡದೇ ಕೆಲಸ ಕಳೆದುಕೊಂಡಿದ್ದ ಮಹಿಳೆಯ ಕುಟುಂಬಕ್ಕೆ ಈಗ ಉದ್ಯೋಗ ಭದ್ರತೆ ಸಿಕ್ಕಿದೆ.

ಕಚೇರಿಯ ಕಸ ಗುಡಿಸುವ, ಕಡತಗಳನ್ನು ತಂದುಕೊಡುವ ಕೆಲಸಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಮಹಿಳೆ ಮೂರು ವರ್ಷಗಳ ಹಿಂದೆ ಸೇರಿದ್ದರು. ಅವರಿಗೆ ಮಾಸಿಕ ₹ 7,500 ವೇತನ ನಿಗದಿಪಡಿಸಲಾಗಿತ್ತು. ₹ 4,000 ಬಾಡಿಗೆಯ ಮನೆಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಪತಿಗೆ ಎಚ್‌ಐವಿ ಖಚಿತವಾದ ಬಳಿಕ ಕುಟುಂಬದ ನೆಮ್ಮದಿ ಹಾಳಾಗಿತ್ತು. ಸಂಕಷ್ಟವನ್ನು ಸಹೋದ್ಯೋಗಿಯೊಂದಿಗೆ ಹಂಚಿಕೊಂಡ ವಿಚಾರ ಏಜೆನ್ಸಿಗೆ ತಿಳಿದು ಉದ್ಯೋಗಕ್ಕೆ ಕುತ್ತು ಎದುರಾಗಿತ್ತು.

ADVERTISEMENT

‘ಮಹಿಳೆ ಕಸ ಗುಡಿಸಿ, ನೆಲಹಾಸು ಹಾಗೂ ಟೇಬಲ್‌ ಸ್ವಚ್ಛಗೊಳಿಸುತ್ತಾರೆ. ಟೀ, ಕಾಫಿ ತರುವ ಹಾಗೂ ಹಣ್ಣುಗಳನ್ನು ಕತ್ತರಿಸಿ ಕೊಡುವ ಕೆಲಸವನ್ನೂ ಮಾಡುತ್ತಾರೆ. ಅವರಿಂದ ಕಚೇರಿಯ ಸಿಬ್ಬಂದಿಗೂ ಎಚ್‌ಐವಿ ಹರಡಬಹುದು’ ಎಂದು ಏಜೆನ್ಸಿ ತಗಾದೆ ತೆಗೆದಿತ್ತು. ಕೆಎಎಸ್‌ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಏಜೆನ್ಸಿ ಹಾಗೂ ಉದ್ಯೋಗಿಗಳ ತಪ್ಪುಕಲ್ಪನೆ ಹೋಗಲಾಡಿಸುವ ಪ್ರಯತ್ನ ನಡೆಸಿ ವಿಫಲರಾಗಿದ್ದರು. ವೈದ್ಯಕೀಯ ಪರೀಕ್ಷೆ ಮಾಡಿಸಿ ಎಚ್‌ಐವಿ ಇಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೂರು ತಿಂಗಳು ವೇತನ ಸಹಿತ ರಜೆ ನೀಡಿ ಉಪಾಯದಿಂದ ಮನೆಗೆ ಕಳುಹಿಸಿದ್ದ ಏಜೆನ್ಸಿ, ಮರಳಿ ಉದ್ಯೋಗ ನೀಡಿರಲಿಲ್ಲ.

ಔಷಧ ಸೇವಿಸದ ಎಚ್‌ಐವಿ ಪೀಡಿತರ ಮೇಲೆ ನಿಗಾ ಇಟ್ಟಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ‘ಸಂಜೀವಿನಿ’ಯ ಸಿಬ್ಬಂದಿ ಈ ಮಹಿಳೆಯ ಮನೆಗೆ ಭೇಟಿ ನೀಡಿದ್ದರು. ಎಚ್‌ಐವಿ ಔಷಧ ಪಡೆಯಲು ಎರಡು ತಿಂಗಳು ಎಆರ್‌ಟಿ ಕೇಂದ್ರಕ್ಕೆ ಬಾರದಿರುವ ಪತಿಯ ಬಗ್ಗೆ ವಿಚಾರಿಸಿದ್ದರು. ಆಗ ಉದ್ಯೋಗ ಸ್ಥಳದಲ್ಲಿ ತಾರತಮ್ಯಕ್ಕೆ ಒಳಗಾಗಿ ಅನುಭವಿಸಿದ ಸಂಕಟವನ್ನು ಮಹಿಳೆ ಹೇಳಿಕೊಂಡಿದ್ದರು. ಇದು ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಗಮನಕ್ಕೆ ಬಂದಿತ್ತು.

‘ಎಚ್‌ಐವಿ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ– 2017ರ ಪ್ರಕಾರ ಎಚ್‌ಐವಿ ಕಾರಣಕ್ಕೆ ಉದ್ಯೋಗ ಸ್ಥಳದಲ್ಲಿ ತಾರತಮ್ಯ ಮಾಡುವಂತಿಲ್ಲ. ಇಂತಹ ಅಪರಾಧಕ್ಕೆ ಎರಡು ವರ್ಷ ಜೈಲು ಹಾಗೂ ದಂಡ ವಿಧಿಸಲು ಅವಕಾಶವಿದೆ. ಈ ಬಗ್ಗೆ ಹೊರಗುತ್ತಿಗೆ ಏಜೆನ್ಸಿ ಹಾಗೂ ಕಚೇರಿ ಸಿಬ್ಬಂದಿಯ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದಾಗ ಮಹಿಳೆ ಒಂಬುಡ್ಸ್‌ಮನ್‌ ಮೊರೆ ಹೋಗಿದ್ದರು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಎಚ್‌ಐವಿ ಏಡ್ಸ್‌ ಒಂಬುಡ್ಸ್‌ಮನ್‌ ಡಾ.ಶಿವಕುಮಾರ್‌ ವೀರಯ್ಯ ಪ್ರಕರಣದ ವಿಚಾರಣೆಯನ್ನು  ತ್ವರಿತವಾಗಿ ನಡೆಸಿದರು. ಹೊರಗುತ್ತಿಗೆ ಏಜೆನ್ಸಿಗೆ ಎಚ್ಚರಿಕೆ ನೀಡಿ ಮರುನೇಮಕಾತಿಗೆ ಆದೇಶಿಸಿದ್ದರು. ಹೆಚ್ಚುವರಿ ವೇತನದೊಂದಿಗೆ ಮಹಿಳೆ ಎರಡು ತಿಂಗಳಿಂದ ಉದ್ಯೋಗಕ್ಕೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.