ADVERTISEMENT

ಕೃಷಿಕರನ್ನು ಆಕರ್ಷಿಸಿದ ಅಡಿಕೆ ಕೃಷಿಯಂತ್ರಗಳು

ಮರ ಹತ್ತುವ ಯಂತ್ರ, ಕೀಳುವ, ಸುಲಿಯುವ ಯಂತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 2:49 IST
Last Updated 20 ಸೆಪ್ಟೆಂಬರ್ 2022, 2:49 IST
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಡಿಕೆ ಕೃಷಿ ಯಂತ್ರ ಮೇಳವನ್ನು ಅತಿಥಿಗಳು ವೀಕ್ಷಿಸಿದರು
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಡಿಕೆ ಕೃಷಿ ಯಂತ್ರ ಮೇಳವನ್ನು ಅತಿಥಿಗಳು ವೀಕ್ಷಿಸಿದರು   

ದಾವಣಗೆರೆ: ಆಧುನಿಕ ಅಡಿಕೆ ಕೃಷಿಯಂತ್ರಗಳನ್ನು ಹುಡುಕಿಕೊಂಡು ಬೇರೆಡೆಗೆ ಹೋಗುವುದನ್ನು ತಪ್ಪಿಸಲು ದಾವಣಗೆರೆಯಲ್ಲಿಯೇ ಸೋಮವಾರ ಅಡಿಕೆ ಕೃಷಿ ಯಂತ್ರ ಮೇಳ ನಡೆಯಿತು. ಗ್ರಾಮೀಣ ಅಡಿಕೆ ಬೆಳೆಗಾರರು ಬಂದು ಮಾಹಿತಿ ಪಡೆದು, ಅಗತ್ಯ ಸಣ್ಣ ಯಂತ್ರಗಳನ್ನು ಖರೀದಿಸಿ ಊರಿಗೆ ಮರಳಿದರು.

ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಹಾಗೂ ಮಾರಾಟ ಸಹಕಾರ ಸಂಘ, ಕುಣಿಗಲ್ ಟೆಂಡರ್ ಟುಡೇ ಸಂಸ್ಥೆ ವತಿಯಿಂದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಈ ಮೇಳ ಆಯೋಜಿಸಲಾಗಿತ್ತು. ಅಡಿಕೆ ಬೆಳೆಗಾರರು ಬಳಸಬಹುದಾದ ಸರಳ, ಆಧುನಿಕ ಕೃಷಿ ಉಪಕರಣಗಳು ಹೆಚ್ಚು ಆಕರ್ಷಣೆಗೆ ಒಳಗಾದವು.

ಹಸಿ ಮತ್ತು ಒಣ ಅಡಿಕೆ ಸುಲಿಯುವ ಯಂತ್ರ, ಔಷಧ ಹೊಡೆಯುವ ಮತ್ತು ಅಡಿಕೆ ಗೊನೆ ತೆಗೆಯುವ ಹೈಟೆಕ್ ಕಾರ್ಬನ್ ಫೈಬರ್ ದೋಟಿ, ಮಿನಿ ಟ್ರ್ಯಾಕ್ಟರ್, ಕೈಗಾಡಿಗಳು, ರೋಟರ್‌ ಟಿಲ್ಲರ್, ಪವರ್ ಟಿಲ್ಲರ್, ನಾಟಿ ಯಂತ್ರ, ರೋಟೋವೇಟರ್, ಅಡಿಕೆ ಮರ ಹತ್ತುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ಬುಡ ಬಿಡಿಸುವ ಯಂತ್ರ, ವೀಲ್ಡ್ ಬ್ರಶ್ ಕಟ್ಟರ್, ಕೈ ಗರಗಸ, ಅಡಿಕೆ ಬೇಯಿಸುವ ಸ್ಟೀಲ್ ಕಂಟೈನರ್, ಕಲ್ಲಿನ ಗೊರಬಲು ಪಾಲಿಷರ್, ಸಿಪ್ಪೆ ಮತ್ತು ಅಡಿಕೆಕಾಯಿ ಕನ್ವೆಯರ್, ಅಡಿಕೆ ಮರ ಗೊಂಚಲು ಕೊಯ್ಯುವ ಯಂತ್ರ, ಅಡಿಕೆ ಗೊನೆ ಬಿಡಿಸುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಟ್ಟು ಅವುಗಳ ಬಗ್ಗೆ ಮಾಹಿತಿ ನೀಡಲಾಯಿತು.

ADVERTISEMENT

ಅಡಿಕೆಯಿಂದ ಉಪ್ಪಿನಕಾಯಿ ಹಾಗೂ ಇತರೆ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಯಿತು. ಅಡಿಕೆ ಸಿಪ್ಪೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಯಿತು.

ಉದ್ಘಾಟನೆ: ಮೇಳವನ್ನು ದಾಮ್‌ಕೋಸ್ ಸಂಸ್ಥಾಪಕ ಅಧ್ಯಕ್ಷ ಜಯಣ್ಣ, ಅಧ್ಯಕ್ಷ ಬಾತಿ ಶಿವಕುಮಾರ್‌ ಬಿ.ಕೆ. ಉದ್ಘಾಟಿಸಿದರು. ಅಡಿಕೆ ಉಪಕರಣಗಳಿಗಾಗಿ ರಾಜ್ಯದ ದಕ್ಷಿಣ ಕನ್ನಡ, ತೀರ್ಥಹಳ್ಳಿ, ಪುತ್ತೂರು, ಮಂಗಳೂರು ಸೇರಿದಂತೆ ಇತರ ಕಡೆ ತೆರಳಿ ಖರೀದಿಸಬೇಕಿತ್ತು. ಸುಲಭದಲ್ಲಿ ಸಿಗುವಂತಾಗಲು ದಾವಣಗೆರೆಯಲ್ಲಿ ಅಡಿಕೆ ಕೃಷಿ ಯಂತ್ರ ಮೇಳ ಆಯೋಜಿಸಲಾಗಿದೆ ಎಂದು ಜಯಣ್ಣ ತಿಳಿಸಿದರು.

ಜಿಲ್ಲೆಯಾದ್ಯಂತ ಭತ್ತ, ರಾಗಿ ಸೇರಿದಂತೆ ಇತರೆ ಬೆಳೆ ಬೆಳೆಲಾಗುತ್ತಿತ್ತು‌‌‌. ಇತ್ತೀಚೆಗೆ ಅವುಗಳನ್ನು ಬಿಟ್ಟು ಅಡಿಕೆ ಕಡೆಗೆ ಮುಖ ಮಾಡಿದ್ದಾರೆ. ಅವರಿಗೆ ಈ ಪ್ರದರ್ಶನ ಉಪಯೋಗವಾಗಲಿದೆ ಎಂದುಬಾತಿ ಶಿವಕುಮಾರ್‌ ಬಿ.ಕೆ. ಹೇಳಿದರು.

ವಕೀಲ ರೇವಣ್ಣ ಬಳ್ಳಾರಿ, ದಾಮ್ ಕೋಸ್ ನಿರ್ದೇಶಕ ಎಚ್.ಜಿ. ಮಲ್ಲಿಕಾರ್ಜುನ್, ಕಾರ್ಯದರ್ಶಿ ಡಿ.ಎಚ್. ಶಿವಕುಮಾರ್, ಶಿವಾನಂದ ಎಂ.ಎನ್‌., ಶ್ರೀಹರಿ ಎನ್‌. ಗೌರಿಪುರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.