
ದಾವಣಗೆರೆ: ‘ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಭಯ, ಆತಂಕದಿಂದ ಮಾನಸಿಕ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಆತಂಕದಿಂದ ಮುಕ್ತಿ ಪಡೆಯುವ ಜತೆಗೆ ಒತ್ತಡರಹಿತ ಜೀವನದ ಆನಂದವನ್ನು ಅನುಭವಿಸಬಹುದು’ ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌ನ ಹಿರಿಯ ಕಾರ್ಯ ನಿರ್ವಹಣಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ ಹೇಳಿದರು.
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಹಯೋಗದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಲಾ ಅಂತರ್ಗತ ಶಾಲಾ ಯೋಜನೆಗಳ ಪರಿಚಯ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯು 30 ವರ್ಷಗಳಿಂದ ಚಟುವಟಿಕೆ ನಡೆಸಿಕೊಂಡು ಬಂದಿದೆ. ಮಕ್ಕಳ ಕಲಿಕೆ ಸಹಜವಾಗಿರಬೇಕು, ಒತ್ತಡ ರಹಿತವಾಗಿರಬೇಕು. ಖುಷಿಯಿಂದ ಕಲಿಯುವ ವಾತಾವರಣವನ್ನು ಸೃಷ್ಟಿಸಬೇಕು’ ಎಂದು ಹೇಳಿದರು.
‘ತಮ್ಮ ಶಾಲೆಯು 2002 ರಲ್ಲಿ ಆರಂಭವಾಯಿತು. ಕೆನಡಾ ದೇಶದ ದಂಪತಿ ಈ ಶಾಲೆಯನ್ನು ಆರಂಭಿಸಿದರು. 20 ವಿದ್ಯಾರ್ಥಿಗಳಿಂದ ಆರಂಭವಾಗಿ ಈಗ 220 ವಿದ್ಯಾರ್ಥಿಗಳಿದ್ದಾರೆ’ ಎಂದು ಕಲ್ಕೇರಿ ಸಂಗೀತ ವಿದ್ಯಾಲಯದ ಸುನೀಲ್ ಮಾನಿ ಮಾಹಿತಿ ನೀಡಿದರು.
‘ಇಲ್ಲಿ ಉಚಿತವಾಗಿ ಹಿಂದುಸ್ತಾನಿ ಸಂಗೀತದ ಶಿಕ್ಷಣ ನೀಡಲಾಗುತ್ತದೆ. ವಿವಿಧ ಉದ್ಯಮಗಳು ಸಿಎಸ್‌ಆರ್ ನಿಧಿಯಿಂದ ನೆರವು ನೀಡುತ್ತಿವೆ’ ಎಂದು ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ್ ಕುಮಾರ್ ಪಿ.ವಲ್ಲೇಪುರೆ, ಹಿರಿಯ ರಂಗಕರ್ಮಿ ಸಿದ್ದರಾಜು, ಬೆಂಗಳೂರಿನ ರಾಧಿಕಾ ಭಾರದ್ವಾಜ್, ಮುರಳೀಧರ, ಎಸ್.ಎಫ್. ಹುಸೇನಿ, ಅರುಣ್, ನಿರ್ಮಲಾ, ಡಾ. ಮನೋಹರ್, ಲೇಖಕ ಬಾ.ಮ. ಬಸವರಾಜಯ್ಯ, ಕಲಾವಿದರಾದ ಮಹಾಲಿಂಗಪ್ಪ, ರವೀಂದ್ರ ಅರಳಗುಪ್ಪಿ ಭಾಗವಹಿಸಿದ್ದರು.
ಬೆಳಿಗ್ಗೆಯಿಂದ ಓರಿಗಾಮಿ, ಕಿರಿಗಾಮಿ ಹಾಗೂ ಅನ್ವಯಿಕ ರಂಗಕಲೆ ಬಗ್ಗೆ ಕಾರ್ಯಾಗಾರ ನಡೆದವು. ಭಾನುವಾರ ಬೆಳಿಗ್ಗೆ 9.15 ರಿಂದ ಅನ್ವಯಿಕ ಸಂಗೀತ, ನಾಟಕ ಮತ್ತು ಕೀಟಗಳ ಪ್ರಪಂಚ ಕಾರ್ಯಾಗಾರ ನಡೆಯಲಿದೆ. 11.30 ರಿಂದ ಮೈಸೂರಿನ ಅರಿವು ಶಾಲೆ ಮಕ್ಕಳಿಂದ ಮಾಲ್ಗುಡಿಗೆ ದಾರಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 1.15ಕ್ಕೆ ಸಮಾರೋಪ ಕಾರ್ಯಕ್ರಮ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.