ADVERTISEMENT

ಚನ್ನಗಿರಿ: ಆಷಾಡ ಏಕಾದಶಿ; ಹಲಸಿನ ಹಣ್ಣು ಮಾರಾಟ ಜೋರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:27 IST
Last Updated 4 ಜುಲೈ 2025, 13:27 IST
ಚನ್ನಗಿರಿ ಪಟ್ಟಣದಲ್ಲಿ ಏಕಾದಶಿ ಹಬ್ಬದ ಅಂಗವಾಗಿ ಶುಕ್ರವಾರ ಹಲಸಿನ ಹಣ್ಣುಗಳ ಮಾರಾಟ ನಡೆಯಿತು
ಚನ್ನಗಿರಿ ಪಟ್ಟಣದಲ್ಲಿ ಏಕಾದಶಿ ಹಬ್ಬದ ಅಂಗವಾಗಿ ಶುಕ್ರವಾರ ಹಲಸಿನ ಹಣ್ಣುಗಳ ಮಾರಾಟ ನಡೆಯಿತು   

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜುಲೈ 5ರಿಂದ 3 ದಿನ ಆಷಾಡ ಏಕಾದಶಿ ಆಚರಿಸಲಾಗುತ್ತಿದ್ದು, ಪೂಜೆಗೆ ಅಗತ್ಯವಿರುವ ಹಣ್ಣು ಹಾಗೂ ಇನ್ನಿತರ ಸಾಮಗ್ರಿಗಳ ಖರೀದಿ ಪಟ್ಟಣದಲ್ಲಿ ಭರದಿಂದ ನಡೆಯಿತು. 

ತಿರುಪತಿ ತಿಮ್ಮಪ್ಪ ಹಾಗೂ ರಂಗನಾಥ ಸ್ವಾಮಿ ದೇವರನ್ನು ಮನೆಯ ದೇವರನ್ನಾಗಿ ಹೊಂದಿರುವವರು ಆಷಾಡ ಏಕಾದಶಿ ಆಚರಿಸುವುದು ವಿಶೇಷವಾಗಿದೆ. 

ಏಕಾದಶಿ ದಿನ ಮನೆಯ ಸದಸ್ಯರು ಸ್ನಾನ ಮುಗಿಸಿ ಪೂಜೆ ಸಲ್ಲಿಸುತ್ತಾರೆ. ಹಲಸಿನ ಹಣ್ಣಿನ ತೊಳೆ, ಒಣ ಕೊಬ್ಬರಿ ತುರಿ ಹಾಗೂ ಕಡಲೆ ಹಿಟ್ಟನ್ನು ಸೇರಿಸಿ ಮಿಶ್ರಣವನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ನೈವೇದ್ಯವನ್ನು ಮನೆ ಮಂದಿಯೆಲ್ಲಾ ಭಕ್ತಿ ಭಾವದಿಂದ ಸೇವಿಸುತ್ತಾರೆ. ದೋಸೆ, ಕಡುಬು, ಹೋಳಿಗೆ, ಪಾಯಸವನ್ನೂ ಸವಿಯುತ್ತಾರೆ. 

ADVERTISEMENT

ಹಲಸಿನ ಹಣ್ಣು ಇಲ್ಲದೇ ಹಬ್ಬ ಆಚರಿಸುವುದಿಲ್ಲ. ಹೀಗಾಗಿ ಈ ಹಬ್ಬಕ್ಕೆ ಹಲಸಿನ ಹಣ್ಣು ಅಗತ್ಯವಾಗಿ ಬೇಕಾಗಿದೆ. ಈ ಕಾರಣದಿಂದಾಗಿ ಹಲಸಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. 2–3 ದಿನಗಳಿಂದ ಪಟ್ಟಣ ಹಾಗೂ ತಾಲ್ಲೂಕಿನ ಇತರೆ ಗ್ರಾಮಗಳಲ್ಲಿ ರಸ್ತೆ ಬದಿಗಳಲ್ಲಿ ಹಲಸಿನ ಹಣ್ಣುಗಳ ಮಾರಾಟ ಜೋರಾಗಿದೆ. 

‌ಏಕಾದಶಿ ಹಬ್ಬವಾಗಿರುವುದರಿಂದ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಗಾತ್ರಕ್ಕೆ ತಕ್ಕಂತೆ ಹಣ್ಣಿನ ವ್ಯಾಪಾರಿಗಳು ದರ ನಿಗದಿ ಮಾಡಿದ್ದು, ಒಂದು ಹಲಸಿನ ಹಣ್ಣನ್ನು ₹100 ರಿಂದ ₹200ರ ವರೆಗೆ ಮಾರಾಟ ಮಾಡುತ್ತಿದ್ದಾರೆ. ದರ ಹೆಚ್ಚಿದ್ದರೂ ಖರೀದಿ ಅನಿವಾರ್ಯ ಎನ್ನುತ್ತಾರೆ ಗರಗ ಗ್ರಾಮದ ನಿವಾಸಿ ರುದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.