ADVERTISEMENT

ಎಲ್‌ಎಚ್‌ವಿ ಕೆ. ಗಾಯತ್ರಿದೇವಿ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

ಗ್ರಾಮೀಣ ಜನರ ಸೇವೆಗೆ ಸಂದ ಗೌರವ

ಡಿ.ಕೆ.ಬಸವರಾಜು
Published 18 ಸೆಪ್ಟೆಂಬರ್ 2021, 2:04 IST
Last Updated 18 ಸೆಪ್ಟೆಂಬರ್ 2021, 2:04 IST
ಗಾಯಿತ್ರಿ ದೇವಿ
ಗಾಯಿತ್ರಿ ದೇವಿ   

ದಾವಣಗೆರೆ: ‘1988ರಲ್ಲಿ ಜನರು ಕಾಲರಾದಿಂದ ನರಳುತ್ತಿದ್ದ ಸಮಯವದು. ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಹಿಂಜರಿಯುತ್ತಿದ್ದ ಜನರಿಗೆ ಕರೆದು ಲಸಿಕೆ ಹಾಕಬೇಕಿತ್ತು..’

– ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದಹಿರಿಯ ಮಹಿಳಾ ಆರೋಗ್ಯ ಸಹಾಯಕಿ (ಎಲ್‌ಎಚ್‌ವಿ) ಕೆ. ಗಾಯತ್ರಿದೇವಿ ಅವರ ನುಡಿ ಇದು.

ಇವರ34 ವರ್ಷಗಳ ಸೇವೆಯನ್ನು ಪರಿಗಣಿಸಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ 2020ರ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿದ್ದು,ಸೆ.15ರಂದುರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ‘ವರ್ಚುಯಲ್’ ಆಗಿ ಪ್ರಶಸ್ತಿ ಪ್ರದಾನ ಮಾಡಿದರು.ಕಾಲರಾ ಬಂದ ಕಾಲದಿಂದ ಹಿಡಿದು ಕೊರೊನಾ ಕಾಲದವರೆಗೂ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

ADVERTISEMENT

‘1986ರಲ್ಲಿ ಚಿತ್ರದುರ್ಗ ಜಿಲ್ಲೆಯ ತಳುಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಆರಂಭಿಸಿ, ಅಲ್ಲಿ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಆ ವೇಳೆಯಲ್ಲಿ ನಾಯಕನಹಟ್ಟಿಯಲ್ಲಿ ಜಾತ್ರೆ ನಡೆಯುತ್ತಿದ್ದ ವೇಳೆ ಬಿಸಿಲಿನಲ್ಲೇ ಕುಳಿತು ಜನರನ್ನು ಕರೆದು ಲಸಿಕೆ ಹಾಕಿದ್ದೇನೆ’ ಎಂದು ಗಾಯತ್ರಿದೇವಿ ನೆನಪಿಸಿಕೊಳ್ಳುತ್ತಾರೆ.

ತಾಯಿ ಮಕ್ಕಳ ಆರೋಗ್ಯ, ಗರ್ಭಿಣಿಯ ಆರೈಕೆ, ರಾಷ್ಟ್ರೀಯ ಲಸಿಕೆ ಕಾರ್ಯಕ್ರಮ, ಶಾಲಾ ಮತ್ತು ಅಂಗನವಾಡಿ ಆರೋಗ್ಯ ಕಾರ್ಯಕ್ರಮ, ಟಿ.ಬಿ.ರೋಗಗಳ ನೋಂದಣಿ ಮತ್ತು ಚಿಕಿತ್ಸೆ, ಕಾಲರಾ ಇನ್‌ಕ್ಯುಬೇಷನ್ ಕಾರ್ಯಕ್ರಮ, ಮಲೇರಿಯಾ ರೋಗಗಳ ಸಮೀಕ್ಷೆ ಮತ್ತು ಆರೈಕೆ, ಜಂತುಹುಳುವಿನ ಕಾರ್ಯಕ್ರಮ, ಗ್ರಾಮೀಣ ಮತ್ತು ಕೊಳಚೆ ಪ್ರದೇಶಗಳ ಜನರ ಆರೋಗ್ಯ ಸುಧಾರಣಾ ಕಾರ್ಯಕ್ರಮ, ಆರೋಗ್ಯ ಸಂಬಂಧಿ, ಸಭೆ ಹಾಗೂ ಸಂವಾದ ಕಾರ್ಯಕ್ರಮಗಳ ನಿರ್ವಹಣೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

1991ರಿಂದ 2010ರವರೆಗೆ ಚಳ್ಳಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗರ ಪ್ರದೇಶದ ಹಿಂದುಳಿದ ಹಟ್ಟಿಗಳಲ್ಲಿ ಕೆಲಸ ನಿರ್ವಹಿಸಿದ ಬಳಿಕ 2010ರಿಂದ 16ರವರೆಗೆ ದಾವಣಗೆರೆ ನಗರ ಕುಟುಂಬ ಕಲ್ಯಾಣ ಕೇಂದ್ರದ ಮೂಲಕಬಸವರಾಜಪೇಟೆ, ನರಸರಾಜಪೇಟೆ, ಬಂಬೂ ಬಜಾರ್, ಒಕ್ಕಲಿಗರಪೇಟೆ, ಇಮಾಮ್‌ನಗರಗಳಂತಹ ಕೊಳೆಗೇರಿ ಗಳಲ್ಲಿ ಕೆಲಸ ನಿರ್ವಹಿಸಿದರು.

2016ರಿಂದ ಒಂದು ವರ್ಷ ದಾವಣಗೆರೆ ತಾಲ್ಲೂಕಿನ ರಾಮಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ 2017ರಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಪದೋನ್ನತಿ ಹೊಂದಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಸೇವೆಗೆ ಹಲವು ಗೌರವಗಳು ಸಂದಿವೆ. 2006ರಲ್ಲಿ ಚಳ್ಳಕೆರೆಯಲ್ಲಿ ರೋಟರಿ ಕ್ಲಬ್ ಇವರನ್ನು ಸನ್ಮಾನಿಸಿದ್ದು, 2019ರಲ್ಲಿ ಬೆಂಗಳೂರಿನ ನ್ಯಾಷನಲ್ ಪ್ರೆಸ್ ಕೌನ್ಸಿಲ್‌ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿವೆ. 2020ರಲ್ಲಿ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವದಂದು ಸರ್ವೋತ್ತಮ ಸೇವಾ ಪ್ರಶಸ್ತಿ ಬಂದಿವೆ.

‘ನಾನು ಕೆಲಸ ಮಾಡುವ ವೇಳೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಇಲಾಖಾ ಸಿಬ್ಬಂದಿ, ಸಹೋದ್ಯೋಗಿಗಳು ಹಾಗೂ ಸಂಘ–ಸಂಸ್ಥೆಗಳ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಯಿತು’ ಎಂದು ಗಾಯತ್ರಿದೇವಿ.

**
ಕೊಳಚೆ ಪ್ರದೇಶಗಳಲ್ಲಿ ಬಡಜನರ ಜೊತೆಗೆ ನಾನು ಒಬ್ಬಳಾಗಿ ಕಾರ್ಯ ನಿರ್ವಹಿಸಿದೆ. ಕೋವಿಡ್ ಕಾಲದಲ್ಲಿ ರಜೆಗಳನ್ನು ತೆಗೆದುಕೊಳ್ಳದೇ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಸರ್ಕಾರ ನನ್ನನ್ನು ಪ್ರಶಸ್ತಿಗೆ ಗುರುತಿಸಿದೆ.
-ಕೆ.ಗಾಯತ್ರಿದೇವಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.