ADVERTISEMENT

‘ಬಿ–ಖಾತಾ’ಗೆ ಶೀಘ್ರ ಹೊಸ ಆದೇಶ: ಸಚಿವ ರಹೀಂ ಖಾನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:28 IST
Last Updated 4 ಜೂನ್ 2025, 15:28 IST
ರಹೀಂ ಖಾನ್‌
ರಹೀಂ ಖಾನ್‌   

ದಾವಣಗೆರೆ: ನಿವೇಶನ ಅಥವಾ ಕಟ್ಟಡಗಳಿಗೆ ಸಂಬಂಧಿಸಿದ ಕರಾರು ಹಾಗೂ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಹೊಂದಿದವರು ಕೂಡ ‘ಬಿ–ಖಾತಾ’ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಸರ್ಕಾರ ಶೀಘ್ರದಲ್ಲೇ ಹೊಸ ಆದೇಶವೊಂದನ್ನು ಹೊರಡಿಸಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಸ್ತಿ ನೋಂದಣಿ ಮಾಡಿಕೊಳ್ಳದೇ ಇರುವವರು ಕೂಡ ‘ಬಿ–ಖಾತಾ’ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಕಾನೂನು ಅಭಿಪ್ರಾಯ ಕೇಳಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಸಿಕ್ಕ ತಕ್ಷಣ ಹೊಸ ಆದೇಶದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ವಿತರಣೆ ಮಾಡಿದ ‘ಬಿ–ಖಾತಾ’ದಲ್ಲಿನ ಲೋಪದೋಷವನ್ನು ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ನಗರ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು, ಕಸ ಎತ್ತುವವರು, ನೀರಗಂಟಿ ಸೇರಿ ಇತರರು ಸೇವೆ ಕಾಯಂಗೊಳಿಸುವಂತೆ ಹೋರಾಟ ನಡೆಸಿದ್ದಾರೆ. ಇವರ ವೇತನವನ್ನು ಹೊರಗುತ್ತಿಗೆ ಏಜೆನ್ಸಿ ಕಡಿತ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. 15 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಸುಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಟ್ಯಾಂಕ್‌ಗಳನ್ನು ನಿಯಮಿತವಾಗಿ ಶುಚಿಗೊಳಿಸಬೇಕು. ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದ ಸಂಭವಿಸಿದ ಅವಘಡ ಮರುಕಳುಹಿಸದಂತೆ ಎಚ್ಚರವಹಿಸಬೇಕು’ ಎಂದು ಹೇಳಿದರು.

‘ಸರ್ಕಾರದಿಂದ ಬಿಡುಗಡೆಯಾದ ಅನುದಾನ ಆಯಾ ಆರ್ಥಿಕ ವರ್ಷದಲ್ಲೇ ಬಳಕೆ ಮಾಡಬೇಕು. ನಗರೋತ್ಥಾನ, ಅಮೃತ್‌–2, ತ್ಯಾಜ್ಯ ವಿಲೇವಾರಿಯಲ್ಲಿ ವಿಳಂಬ ಧೋರಣೆ ಸಹಿಸಲು ಸಾಧ್ಯವಿಲ್ಲ. ಹರಿಹರ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್‌.ಮಹಾಂತೇಶ್‌ ಹಾಜರಿದ್ದರು.

‘ನೀರು ಸೋರಿಕೆ ತಡೆಯಬೇಕು’

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಿಂದ ಜಗಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ₹ 14 ಕೋಟಿ ವೆಚ್ಚದಲ್ಲಿ ನಡೆದ ಕಾಮಗಾರಿಯ ಉದ್ದೇಶ ಸಫಲವಾಗಿಲ್ಲ. ಸೂಳೆಕೆರೆಯಿಂದ ಜಗಳೂರು ಪಟ್ಟಣ ತಲುಪುವ ಮಾರ್ಗ ಮಧ್ಯೆ ಪೈಪ್‌ಲೈನ್‌ನಿಂದ ಆಗುತ್ತಿರುವ ನೀರು ಸೋರಿಕೆಯನ್ನು ತಡೆಗಟ್ಟುವ ಅಗತ್ಯವಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.

‘ಸೂಳೆಕೆರೆಯಿಂದ ಜಗಳೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸಿದ ಕೊಳವೆ ಮಾರ್ಗ ಚಿತ್ರದುರ್ಗ ತಾಲ್ಲೂಕು ದಾಟಿ ಸಾಗಬೇಕಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಜನರು ಪೈಪ್‌ಲೈನ್‌ ಒಡೆಯುತ್ತಿದ್ದಾರೆ. ಇದರಿಂದ ಜಗಳೂರು ಪಟ್ಟಣಕ್ಕೆ ನೀರು ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ತವ್ಯ ನಿರ್ಲಕ್ಷ್ಯ ತೋರಿದ ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ, ಹರಿಹರ ನಗರಸಭೆ ಕಂದಾಯಾಧಿಕಾರಿ ಅಮಾನತು ಮಾಡಲಾಗಿದೆ. ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಚನ್ನಗಿರಿ ಪುರಸಭೆಯಲ್ಲಿ 2022–23ನೇ ಸಾಲಿನ ಅನುದಾನ ಇನ್ನೂ ಬಳಕೆಯಾಗಿಲ್ಲ. ಟೆಂಡರ್‌, ಗುತ್ತಿಗೆದಾರರ ನೆಪ ಹೇಳಿ ಕಾಲಾಹರಣ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ
ಬಸವರಾಜು ವಿ. ಶಿವಗಂಗಾ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.