ಚನ್ನಗಿರಿ: ಈ ಬಾರಿ ತಾಲ್ಲೂಕಿನಾದ್ಯಂತ ಬಿದ್ದ ಮಳೆಗೆ ರೈತರು ಹಾಗೂ ಅಡಿಕೆ ಬೆಳೆಗಾರರನ್ನುಕಂಗಾಲಾಗಿಸಿದೆ. ಒಂದು
ಕಡೆ ಕಟಾವಿಗೆ ಬಂದಿದ್ದ ರಾಗಿ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಅತಿವೃಷ್ಟಿಯಿಂದಾಗಿ ಹಾನಿಗೊಳಗಾದರೆ, ಇನ್ನೊಂದು ಕಡೆಆಗಾಗ ಬರುತ್ತಿರುವ ಮಳೆಯಿಂದ ಬೇಯಿಸಿದ ಅಡಿಕೆಯನ್ನು ಒಣಗಿಸಲು ಅಡಿಕೆ ಬೆಳೆಗಾರರು ಹರಸಾಹಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಗೆ ಬೆಳೆಗಾರರು ನೂತನ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ತಾಲ್ಲೂಕಿನ ಹರೋನಹಳ್ಳಿ ಗ್ರಾಮದ ಅಡಿಕೆ ಬೆಳೆಗಾರ, ತುಮ್ಕೋಸ್ ನಿರ್ದೇಶಕ ಎಂ.ಸಿ. ದೇವರಾಜ್ ಅಡಿಕೆ ಒಣಗಿಸಲು ವಿನೂತನ ಮಾದರಿ ಅಳವಡಿಸಿಕೊಂಡು, ಈ ಭಾಗದ ಅಡಿಕೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ.
ದೇವರಾಜ್ 50 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯುವ ಪ್ರಮುಖ ಅಡಿಕೆ ಬೆಳೆಗಾರರು. ವರ್ಷವೊಂದಕ್ಕೆ 500 ಕ್ವಿಂಟಲ್ ಅಡಿಕೆ ಇಳುವರಿ ಬರುತ್ತಿದ್ದು, ಮಳೆಗಾಲದ ಸಮಯದಲ್ಲಿ ಬೇಯಿಸಿದ ಅಡಿಕೆಯನ್ನು ಒಣಗಿಸಲು ಬಿಸಿಲು ಇಲ್ಲದೇ ಇರುವುದರಿಂದ ಹಾಗೂ ಮಳೆಯಿಂದಾಗಿ ಸುಲಭ ಖರ್ಚಿನಲ್ಲಿ ಅಡಿಕೆ ಒಣಗಿಸಲು ನೂತನ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.
3 ಅಡಿ ಉದ್ದದ ಕಬ್ಬಿಣದ ಸ್ಟ್ಯಾಂಡ್‌ಗೆ ಎರಡು ಬದಿಯಲ್ಲಿ ಬಿದ್ದು ಹೋದ ಅಡಿಕೆ ಮರದ ತುಂಡುಗಳನ್ನು ಕಟ್ಟಿ, ಅದರ ಮೇಲೆ ಬಿದಿರಿನ ಚಾಪೆಗಳನ್ನು ಹಾಸಿ, ಆ ಚಾಪೆಯ ಮೇಲೆ ಬಿಳಿ ಬಣ್ಣದ ತೆಳುವಾದ ಪಾಲಿಥಿನ್ ಕವರ್ ಹಾಸಿದ್ದಾರೆ. ಹೀಗೇ ಮಾಡುವುದರಿಂದ ಅಡಿಕೆ ಮಳೆಗೆ ನೆನೆಯುವುದಿಲ್ಲ. ಮುಖ್ಯವಾಗಿ ಮೋಡವಿದ್ದರೂ, ವಾತಾವರಣದಲ್ಲಿ ಲಭ್ಯ ಇರುವ ಉಷ್ಣಾಂಶವನ್ನು ಹೀರಿಕೊಳ್ಳುವ ಪಾಲಿಥಿನ್, ಆ ಮೂಲಕ ಅಡಿಕೆಯನ್ನು ಒಣಗಿಸಲು ನೆರವಾಗುತ್ತದೆ. ತಳ ಭಾಗದಲ್ಲಿರುವ ಬಿದಿರಿನ ಚಾಪೆ ಉಷ್ಣತೆ ಹೊರ ಹೋಗದಂತೆ ತಡೆಯುತ್ತದೆ. ಇದರಿಂದ ಅಡಿಕೆ ಹಾಳಾಗುವುದನ್ನು ತಪ್ಪಿಸಬಹುದು. ಇಂತಹ ರೀತಿಯ ಪ್ರಯೋಗಗಳು ಮಲೆನಾಡಿನಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಅರೆ ಮಲೆನಾಡಿನ ಅಡಿಕೆ ಬೆಳೆಗಾರ ರಿಗೂ ಈ ಪ್ರಯೋಗ ಅಳವಡಿಸಬೇಕಾದ ಅನಿರ್ವಾಯ ಸೃಷ್ಟಿಸಿದೆ.
ಕಬ್ಬಿಣದ ಟ್ರೇ ಬಳಸಿ ಅಡಿಕೆ ಡ್ರೈಯರ್‌ಗಳನ್ನು ದೇವರಾಜ್ ಸಿದ್ಧಪಡಿಸಿದ್ದು, ಟ್ರೇನ ತಳಭಾಗಕ್ಕೆ ಅಡಿಕೆ ಸಿಪ್ಪೆಯಿಂದ ಬೆಂಕಿ ಹೊತ್ತಿಸಿ, 110 ಡಿಗ್ರಿಯವರೆಗೆ ಉಷ್ಣಾಂಶವನ್ನು ಕೊಡಲಾಗುತ್ತದೆ. ಈ ಮೂಲಕ ಹಸಿ ಅಡಿಕೆಯನ್ನು ಒಣಗಿಸಲಾಗುತ್ತಿದೆ. 10 ಗಂಟೆಗಳ ಅವಧಿಯಲ್ಲಿ ಅಡಿಕೆ ಒಣಗಿರುತ್ತದೆ. ₹ 50 ಸಾವಿರ ವೆಚ್ಚದಲ್ಲಿ ಈ ಡ್ರೈಯರ್ ಸಿದ್ಧವಾಗಿದೆ. ಒಣಗಿದ ಅಡಿಕೆ ಸಿಪ್ಪೆಗಳನ್ನು ಹಾಕಿ ಸಣ್ಣಗೆ ಉರಿಮಾಡುವ ಮೂಲಕ ಅಡಿಕೆಯನ್ನು ಬೆಚ್ಚಗೆ ಇರುಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಮಳೆಗಾಲದ ಸಮಯದಲ್ಲಿಯೇ ಅಡಿಕೆ ಕಟಾವಿಗೆ ಬರುತ್ತದೆ. ಈ ಸಮಯದಲ್ಲಿ ಬೇಯಿಸಿದ ಅಡಿಕೆಯನ್ನು ಒಣಗಿಸು
ವುದು ಅಡಿಕೆ ಬೆಳೆಗಾರರಿಗೆ ದೊಡ್ಡ ಸಮಸ್ಯೆ. ಅದಕ್ಕಾಗಿ ಈ ಪ್ರಯೋಗ ಮಾಡಿದ್ದೇನೆ’ ಎಂದು ದೇವರಾಜ್ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.