ADVERTISEMENT

ಒಳಮೀಸಲು: ‘ಎದುರಾಗಲಿವೆ ಕಷ್ಟದ ದಿನ‘

ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಕಳವಳ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:30 IST
Last Updated 18 ಆಗಸ್ಟ್ 2024, 15:30 IST
ದಾವಣಗೆರೆಯ ಚಿಗಟೇರಿ ಬಡಾವಣೆಯ ಬಂಜಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚಿಗಟೇರಿ ಬಡಾವಣೆಯ ಬಂಜಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಒಳಮೀಸಲಾತಿ ವ್ಯವಸ್ಥೆ ಜಾರಿಯಾದರೆ ಬಂಜಾರ ಸಮುದಾಯವೂ ಸೇರಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 99 ಜಾತಿಗಳಿಗೆ ಕಷ್ಟದ ದಿನಗಳು ಎದುರಾಗಲಿವೆ. ರಾಜ್ಯದಾದ್ಯಂತ ಸಂಚರಿಸಿ ಸಮುದಾಯ ಜಾಗೃತಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಚಿಗಟೇರಿ ಬಡಾವಣೆಯ ಜಿಲ್ಲಾ ಬಂಜಾರ ಭವನದಲ್ಲಿ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಒಳಮೀಸಲಾತಿ ಜಾರಿಯಾದರೆ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಮಾತ್ರ ಅನುಕೂಲವಾಗಲಿದೆ. ಒಳಮೀಸಲಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಉಳಿದ ಜಾತಿಗಳು ಆಘಾತಗೊಂಡಿವೆ. ಒಳಮೀಸಲು ವ್ಯವಸ್ಥೆ ಜಾರಿಗೊಳಿಸುವ ಮುನ್ನ ರಾಜ್ಯ ಸರ್ಕಾರ ಜಾತಿಗಣತಿ ನಡೆಸಬೇಕು’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಅಧಿಕಾರ ಅವಧಿಯಲ್ಲಿ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇದನ್ನು ಸಮುದಾಯ ವಿರೋಧಿಸಿದೆ. ಒಳಮೀಸಲಾತಿ ಕುರಿತು ಸಂವಿಧಾನದ ಯಾವ ಅನುಚ್ಛೇದದಲ್ಲಿ ಉಲ್ಲೇಖವಿದೆ ತೋರಿಸಿ’ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದಾವಣಗೆರೆ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷ ಎಸ್.ನಂಜಾ ನಾಯ್ಕ, ಮುಖಂಡರಾದ ಹೀರಾ ನಾಯ್ಕ, ಭೋಜ್ಯಾ ನಾಯ್ಕ, ದೇವ್ಲಾ ನಾಯ್ಕ, ಕುಮಾರ ನಾಯ್ಕ, ಜಿ.ಆರ್.ದೇವೇಂದ್ರ ನಾಯ್ಕ, ತಾರ‍್ಯ ನಾಯ್ಕ ಇದ್ದರು.

ಸಮುದಾಯದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಅಲಂಕರಿಸಬೇಕು.

-ಎಂ.ಬಸವರಾಜ ನಾಯ್ಕ ಮಾಜಿ ಶಾಸಕ

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿ.ಎ ನಿವೇಶನಗಳಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಲಾಗುವುದು. ರಿಯಾಯಿತಿ ದರದಲ್ಲಿ ನಿವೇಶನ ನೀಡಲಾಗುವುದು.

-ದಿನೇಶ್‌ ಕೆ.ಶೆಟ್ಟಿ ಅಧ್ಯಕ್ಷ ‘ಧೂಡಾ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.