ಪ್ರಜಾವಾಣಿ ವಾರ್ತೆ
ಜಗಳೂರು: ಮಠಾಧಿಪತಿಗಳ ಒಕ್ಕೂಟ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಸವಸಂಸ್ಕೃತಿ ಅಧ್ಯಯನ ಕುರಿತು ರಾಜ್ಯವ್ಯಾಪಿ ಅಧ್ಯಯನ ಆಂದೋಲನ ನಡೆಸಲಾಗುವುದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅರಿಶಿನಗುಂಡಿ ಗ್ರಾಮದಲ್ಲಿ ಸೋಮವಾರ ನಡೆದ ಸರ್ವಶರಣರ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
‘ಸೆ. 1ರಿಂದ 30ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಬಸವ ತತ್ವ ಮತ್ತು ಚಿಂತನೆಗಳ ಪ್ರಸಾರದ ಕುರಿತು ವಿನೂತನ ಆಂದೋಲನ ನಡೆಸಲಾಗುವುದು. 2019ರಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮದಡಿ ಬಸವಣ್ಣನವರ ಆಶಯದಂತೆ ವೈಚಾರಿಕತೆ ಪ್ರಚಾರ, ಜಾತ್ಯತೀತ ಸಮಸಮಾಜದ ನಿರ್ಮಾಣಕ್ಕೆ ಪೂರಕವಾಗುವ ವಿನೂತನ ಕಾರ್ಯಕ್ರಮಗಳೊಂದಿಗೆ ಸಂಚಾರ ನಡೆಸಲಾಗಿತ್ತು’ ಎಂದು ಹೇಳಿದರು.
‘ಮನುಷ್ಯ ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಲೋಕಕಲ್ಯಾಣದ ಮೂಲಕ ಸಾಮರಸ್ಯ ಕಾಪಾಡಬೇಕು. ಮಹಿಳೆಯರನ್ನು ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಹಾಗೂ ಕುಟುಂಬದಲ್ಲಿ ಅತ್ತೆ, ಸೊಸೆ, ಪತಿ ಮತ್ತು ಎಲ್ಲ ಸದಸ್ಯರ ನಡುವೆ ಬಾಂಧವ್ಯ ಬೆಸೆಯಬೇಕಿದೆ. ಪುರುಷನಿಗೆ ಕುಟುಂಬ ನಿರ್ವಹಣೆಯಲ್ಲಿ ಬೆನ್ನೆಲುಬಾಗಿ ಮಹಿಳೆ ಜವಾಬ್ದಾರಿ ನಿಭಾಯಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಸಿರಿಗೆರೆ ಶ್ರೀಗಳ ಆಶಯದಂತೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿದು ಬಂದಿದ್ದು, ರೈತರು ಲಾಭದಾಯಕ ಕೃಷಿ ಕೈಗೊಳ್ಳಬೇಕು’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಲಹೆ ನೀಡಿದರು.
ಫಾದರ್ ಸಿಲ್ವೆಸ್ಟರ್ ಫೆರೆರಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಪಿ. ಪಾಲಯ್ಯ, ಎಸ್.ಕೆ. ಮಂಜುನಾಥ್, ನಾರಪ್ಪ, ಪತ್ರಕರ್ತ ಸೋಮನಗೌಡ, ಲೋಕೇಶ್, ಬಿ.ಟಿ. ಬಸವರಾಜಪ್ಪ, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಪಲ್ಲಾಗಟ್ಟೆ ಶೇಖರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.