ADVERTISEMENT

ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯುವ ಕಾಂಗ್ರೆಸ್‌ ಸದಸ್ಯರ ವಾಗ್ವಾದ, ತಳ್ಳಾಟ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:39 IST
Last Updated 27 ಜೂನ್ 2025, 15:39 IST
   

ದಾವಣಗೆರೆ: ಏರು ಧ್ವನಿಯಲ್ಲಿ ಮಾತಿನ ಚಕಮಕಿ, ಸಮಾಧಾನ ಪಡಿಸಲು ಯತ್ನಿಸಿದರೂ ತಣಿಯದ ಆಕ್ರೋಶ, ಜೋರು ತಳ್ಳಾಟ, ನೂಕಾಟ..

ಇಲ್ಲಿನ ಎಂಬಿಎ ಕಾಲೇಜಿನ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ‘ಯುವ ಕ್ರಾಂತಿ’ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕಂಡು ಬಂದ ದೃಶ್ಯವಿದು.

ಆರಂಭದಿಂದಲೂ ವೇದಿಕೆ ಕಾರ್ಯಕ್ರಮದ ವಾತಾವರಣವು ‘ಬೂದಿ ಮುಚ್ಚಿದ ಕೆಂಡ’ದಂತಿತ್ತು. ಯುವ ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮದ ಮಧ್ಯದಲ್ಲಿ ಆಗಾಗ ಎದ್ದು ನಿಂತು ಅಸಮಾಧಾನ ಹೊರಹಾಕುತ್ತಿದ್ದರು. ಕೊನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಯುವ ಕಾಂಗ್ರೆಸ್ ಕಾರ್ಯಕರ್ತರ ‘ಒಳ ಜಗಳ’ವನ್ನು ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ADVERTISEMENT

‘ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಅವರು ಕಾರ್ಯಕ್ರಮಕ್ಕೆ ಬಂದಿದ್ದರೂ, ಅವರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಕಡೆಗಣಿಸುತ್ತಿದ್ದಾರೆ’ ಎಂದು ನಿಖಿಲ್ ಕೊಂಡಜ್ಜಿ ‘ಬಣ’ದವರು ನೂತನ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಯಾರನ್ನೂ ನಿರ್ಲಕ್ಷಿಸಿಲ್ಲ. ಉದ್ದೇಶಪೂರ್ವಕವಾಗಿಯೇ ಗದ್ದಲ ಮಾಡುತ್ತಿದ್ದಾರೆ’ ಎಂದು ನಿಖಿಲ್ ಕೊಂಡಜ್ಜಿ ‘ಬಣ’ದವರ ವಿರುದ್ಧ ವರುಣ್ ಬಣದವರು ಅಸಮಾಧಾನ ವ್ಯಕ್ತಪಡಿಸಿದರು. ‘ಎರಡೂ ಗುಂಪು’ಗಳ ನಡುವೆ ವಾಗ್ವಾದ, ಮಾತಿನ ಚಕಮಕಿ ದೊಡ್ಡ ಮಟ್ಟದಲ್ಲೇ ನಡೆಯಿತು. ಎರಡೂ ಕಡೆಯವರನ್ನು ಸಮಾಧಾನ ಪಡಿಸಲು ವೇದಿಕೆಯಲ್ಲಿದ್ದ ನಾಯಕರು ಹರಸಾಹಸಪಟ್ಟರು.

‘ಕಾರ್ಯಕ್ರಮ ಮುಗಿದ ಬಳಿಕ ಪ್ರತ್ಯೇಕ ಸಭೆ ನಡೆಸುತ್ತೇವೆ. ಅಲ್ಲಿ ನಿಮ್ಮ ಸಮಸ್ಯೆಗಳಿಗೆ ಕಿವಿಯಾಗುತ್ತೇವೆ. ಎಲ್ಲವನ್ನೂ ಚರ್ಚಿಸೋಣ, ಈಗ ಕಾರ್ಯಕ್ರಮ ಸುಗಮವಾಗಿ ನಡೆಯಲು ಅನುವು ಮಾಡಿಕೊಡಿ’ ಎಂಬ ನಾಯಕರ ಮಾತಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ.

ವಾಗ್ವಾದ, ತಳ್ಳಾಟ, ನೂಕಾಟದಲ್ಲಿ ತೊಡಗಿದ್ದ ಯುವ ಕಾಂಗ್ರೆಸ್ ಸದಸ್ಯರಿಗೆ ನೋಟಿಸ್ ನೀಡುವಂತೆ ಯುವ ಕಾಂಗ್ರೆಸ್ ಘಟಕದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಸೂಚಿಸಿದರು. ಗದ್ದಲದಲ್ಲೇ ಮುಗಿದ ಕಾರ್ಯಕ್ರಮದ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹಾಗೂ ಇನ್ನಿತರ ನಾಯಕರು ಬೇಸರ ವ್ಯಕ್ತಡಿಸಿದರು.

‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ಯುವ ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಉಸ್ತುವಾರಿ ದೀಪಿಕಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.