ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆ ಪಶು ವೈದ್ಯಕೀಯ ಆಸ್ಪತ್ರೆ ಹಿಂಭಾಗ ಭದ್ರಾ ನಾಲೆಯ ಅಕ್ವಡಕ್ ಬುಧವಾರ ರಾತ್ರಿ ಒಡೆದಿದ್ದು, ನಾಲೆ ನೀರು ಹಳ್ಳದ ಮೂಲಕ ನದಿ ಸೇರುತ್ತಿದೆ. ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಭದ್ರಾವತಿ ತಾಲ್ಲೂಕಿನ ದಿಗ್ಗೇನಹಳ್ಳಿಯಲ್ಲಿ ಅಕ್ವಡಕ್ ಒಡೆದು ತಿಂಗಳ ನಂತರ ಸರಿ ಪಡಿಸಿದ್ದರು. ಆಗ ಕೊನೆ ಭಾಗದ ಜಮೀನುಗಳ ಭತ್ತಕ್ಕೆ ಸರಿಯಾದ ಸಮಯದಲ್ಲಿ ನೀರು ಸಿಗದೆ ಫಸಲು ಇಳುವರಿ ಕಳೆದುಕೊಂಡಿತ್ತು ಹಾಗೂ ಕಡೆ ಭಾಗದ ರೈತರಿಗೆ ನಷ್ಟ ಉಂಟಾಗಿತ್ತು. ಈಗಲೂ ಅದೇ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ತಿಪ್ಪೇಶ್.
‘50 ವರ್ಷಗಳಷ್ಟು ಹಳೆಯದಾದ ಈ ನಾಲೆಯನ್ನು ಬೇಸಿಗೆ ಕಾಲದಲ್ಲಿ ದುರಸ್ತಿ ಮಾಡಿದ್ದರೆ ರೈತರಿಗೆ ನಷ್ಟ ಉಂಟಾಗುತ್ತಿರಲಿಲ್ಲ. ಕ್ಯಾಸಿನಕೆರೆ, ಕುಳಗಟ್ಟೆ, ಹನುಮನಹಳ್ಳಿ, ಸಾಸ್ವೆಹಳ್ಳಿ, ಹಿರೇಬಾಸೂರು, ಬೆನಕನಹಳ್ಳಿ, ಕಮ್ಮಾರಗಟ್ಟೆ ಸೇರಿ ಹಲವು ಗ್ರಾಮಗಳ ರೈತರು ಈಗ ತಾನೇ ಭತ್ತ ನಾಟಿ ಮಾಡಿದ್ದಾರೆ. ನಾಲೆ ನೀರು ಸರಿಯಾಗಿ ಸಿಗದಿದ್ದರೆ ಎಳೆಯ ಸಸಿಗಳು ಒಣಗುತ್ತವೆ. ಆಗ ರೈತರ ಜೀವನ ಕಷ್ಟವಾಗುತ್ತದೆ’ ಎಂದು ರೈತ ಮಲ್ಲೇಶ ಚಾರ್ ನೋವಿನಿಂದ ನುಡಿದರು.
‘ಶಾಸಕರು ಲಕ್ಷಾಂತರ ರೂಪಾಯಿ ಅನುದಾನ ನೀಡಿ ನಾಲೆಯ ಹೂಳು ತೆಗಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಇತ್ತ ಗಮನ ಹರಿಸಿದ್ದರೆ ದುರಸ್ತಿಯಾಗಿ ರೈತರಿಗೆ ನೀರು ಸಿಗುತ್ತಿತ್ತು. ಅಧಿಕಾರಿಗಳು ಸಾರ್ವಜನಿಕರ ಹಣವನ್ನು ತುರ್ತು ಕೆಲಸಗಳಿಗೆ ಬಿಟ್ಟು ಅನಗತ್ಯ ಕೆಲಸಗಳಿಗೆ ಬಳಸುತ್ತಿರುವುದು ಬೇಸರದ ಸಂಗತಿ’ ಎಂದು ಕ್ಯಾಸಿನಕೆರೆ ರೈತ ಪರಮೇಶ್ವರಪ್ಪ ದೂರಿದರು.
ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ನೀರು ಪೋಲಾಗುವುದನ್ನು ತಡೆದಿದ್ದಾರೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.