ADVERTISEMENT

ಸಂತೇಬೆನ್ನೂರು | 'ಭರವಸೆ ಮೂಡಿಸಿದ ಭದ್ರಾ ನಾಲೆ ಪುನಶ್ಚೇತನ ಕಾಮಗಾರಿ'

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:08 IST
Last Updated 15 ಜನವರಿ 2026, 3:08 IST
ಸಂತೇಬೆನ್ನೂರು ಸಮೀಪದ ಸೋಮನಾಳ್‌ ಬಳಿ ಭದ್ರಾ ಉಪನಾಲೆಗೆ ಗೇಟ್‌ ಅಳವಡಿಸುವ ಕಾಮಗಾರಿ
ಸಂತೇಬೆನ್ನೂರು ಸಮೀಪದ ಸೋಮನಾಳ್‌ ಬಳಿ ಭದ್ರಾ ಉಪನಾಲೆಗೆ ಗೇಟ್‌ ಅಳವಡಿಸುವ ಕಾಮಗಾರಿ   

ಸಂತೇಬೆನ್ನೂರು: ಭದ್ರಾನಾಲೆ ಹಾಗೂ ಉಪನಾಲೆಗಳ ಸೂಪರ್‌ ಪ್ಯಾಸೇಜ್‌ ನವೀಕರಣ ಹಾಗೂ ನೂತನ ಗೇಟ್‌ ಗಳ ಅಳವಡಿಕೆ ಕಾಮಗಾರಿ ಭರದಿಂದ ಸಾಗಿದೆ. ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನಾಲೆಗೆ ನೀರು ಹರಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸತತ ಪ್ರಯತ್ನ ನಡೆದಿದೆ.

ನೀರಾವರಿ ಇಲಾಖೆ ತ್ಯಾವಣಿಗೆ ಉಪವಿಭಾಗದ ವ್ಯಾಪ್ತಿಯಲ್ಲಿ ಭದ್ರಾನಾಲೆಗೆ ರೂ.25 ಕೋಟಿ ವೆಚ್ಚದಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿದೆ. 2 ನೇ ವಲಯ ದಿಂದ 7ನೇ ವಲಯದವರೆಗೆ ಕಾಮಗಾರಿ ನಡೆಯುತ್ತಿದೆ. ಸಮೀಪದ ಸೋಮನಾಳ್‌ ಬಳಿ 2ನೇ ವಲಯದ ಉಪ ನಾಲೆಗೆ ಗೇಟ್‌ ಅಳವಡಿಕೆ ಮಾಡಲಾಗಿದೆ. ಗೇಟ್‌ ಗಳು ದುರ್ಬಲಗೊಂಡು ನೀರು ಪೋಲಾಗುವುದನ್ನು ತಡೆಯಲಾಗಿದೆ. ಸೂಪರ್‌ ಪ್ಯಾಸೇಜ್‌ ಗಳಲ್ಲಿ ಯಥೇಚ್ಚ ನೀರು ಹಳ್ಳಗಳಿಗೆ ಹರಿದು ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿರಲಿಲ್ಲ. ಸುಮಾರು ೩೦ ಕಿ.ಮೀ. ಉದ್ದದ ಉಪ ನಾಲೆಗೆ ದುರಸ್ತಿ ರೈತರಿಗೆ ಭರವಸೆ ಮೂಡಿಸಿದೆ.

ಮೆದಿಕೆರೆ, ಯಕ್ಕೆಗೊಂದಿ, ಕಬ್ಬೂರು, ಕುರ್ಕಿ ಬಳಿ ಗೇಟ್‌ ಅಳವಡಿಕೆ ನಡೆಯುತ್ತಿದೆ. ಯಕ್ಕೆಗೊಂದಿ ಬಳಿಯ ಸೂಪರ್‌ ಪ್ಯಾಸೇಜ್‌ ದುರ್ಬಲಗೊಂಡು ಹಳ್ಳಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆ ಆಗುತ್ತಿತ್ತು. ಕಾಮಗಾರಿ ಪೂರ್ಣಗೊಂಡರೆ ನೀರು ಕೊನೆ ಭಾಗಕ್ಕೆ ತಲುಪಲಿದೆ. ಕಳೆದ ಆರೇಳು ದಶಕಗಳ ಹಿಂದಿನ ಗೇಟ್‌, ಸೂಪರ್‌ ಪ್ಯಾಸೇಜ್‌ ಗಳಿಗೆ ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ಕೈಗೊಳ್ಳಲಗಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತ್ಯಾವಣಿಗೆ ವಿಭಾಗದ ಸಹಾಯಕ ಕಾರ್ಯನಿರತ ಎಂಜಿನಿಯರ್‌ ರಮೇಶ್‌ ʼಪ್ರಜಾವಾಣಿʼಗೆ ಮಾಹಿತಿ ನೀಡಿದರು.

ADVERTISEMENT

ಭದ್ರಾ ನಾಲೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಈ ಹಿಂದೆ ಹಲವು ಬಾರಿ ಗೇಟ್‌ ವೀಕ್ಷಣೆ ನಡೆಸಿ ದುರಸ್ತಿಗೆ ಒತ್ತಾಯಿಸಲಾಗಿತ್ತು. ನವೀನ ತಂತ್ರಜ್ಞಾನ ಕಾಮಗಾರಿ ಕೊನೆ ಭಾಗದ ರೈತರಿಗೆ ನೀರು ತಲುಪುವ ಭರವಸೆ ಮೂಡಿಸಿದೆ. ಸದ್ಯದರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ರೈತರು ಸಹಕರಿಸಬೇಕು ಎಂದು ರೈತ ಮುಖಂಡ ತೇಜಸ್ವಿ ಪಟೇಲ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.