
ಮಲೇಬೆನ್ನೂರು: ಬೇಸಿಗೆ ಹಂಗಾಮಿಗೆ ಭದ್ರಾ ನಾಲಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತದ ಸಸಿಮಡಿ ತಯಾರಿ ಕಾರ್ಯ ಈಗ ಭರದಿಂದ ಸಾಗಿದ್ದು, ಭದ್ರಾ ಜಲಾಶಯ ಭರ್ತಿಯಾಗಿದ್ದು ನೀರಿನ ಸಮಸ್ಯೆ ಇಲ್ಲ. ಆದರೆ, ನಾಲೆಗಳಲ್ಲಿ ಹೂಳು ತುಂಬಿದ್ದು ನಾಲೆಯ ಕೊನೆ ಭಾಗದ ರೈತರ ಮುಖದಲ್ಲಿ ಚಿಂತೆ ಮೂಡಿಸಿದೆ.
ಭದ್ರಾ ನಾಲಾ ಅಚ್ಚುಕಟ್ಟಿನ ಹಡ್ಲು, ತೋಟ, ತಗ್ಗು ಪ್ರದೇಶದ ಜಮೀನು ಮತ್ತು ಕೊಳವೆ ಬಾವಿ ವ್ಯವಸ್ಥೆ ಇರುವ ರೈತರು, ಹೊಳೆಸಾಲು ಹಾಗೂ ದೇವರಬೆಳೆಕೆರೆ ಪಿಕಪ್ ಅಚ್ಚುಕಟ್ಟು ಪ್ರದೇಶದಲ್ಲಿ ಬೀಜ ಚೆಲ್ಲಿದ ಕೆಲ ರೈತರು ನಿರಾಳರಾಗಿದ್ದಾರೆ. ಸಮಸ್ಯೆ ಇರುವುದು ನಾಲೆ ನೀರು ನೆಚ್ಚಿಕೊಂಡವರಿಗೆ ಬಹುಸಂಖ್ಯೆ ರೈತರದ್ದಾಗಿದೆ.
ನಾಲೆ ಹೂಳು ತೆಗಿಸಿ:
ನಾಲೆಗಳ ದುರಸ್ತಿ ಹಾಗೂ ಮುಖ್ಯ, ಉಪನಾಲೆ ಹೊಲಗಾಲುವೆ, ಹೂಳು ತುಂಬಿದ್ದರಿಂದ ಕೊನೆಭಾಗಕ್ಕೆ ನೀರು ತಲುಪುವುದು ಕಷ್ಟ. ನೀರು ಸರಾಗವಾಗಿ ತಲುಪುವಂತಾಗಲು ಶೀಘ್ರವೇ ಹೂಳು ತೆಗೆಸಿ ಸಮಸ್ಯೆ ದೂರ ಮಾಡಿ ಎಂದು ರೈತ ಸಂಘದ ಜಿ. ಪ್ರಭುಗೌಡ, ಭಾನುವಳ್ಳಿ ಕೊಟ್ರೇಶ್ ಮನವಿ ಮಾಡಿದ್ದಾರೆ.
‘ಕಳೆದ ಬೇಸಿಗೆ ಹಂಗಾಮಿನಲ್ಲಿ ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೂ ಎಂಜಿನಿಯರ್‌ಗಳ ಭರವಸೆ ಹುಸಿಯಾಗಿ ನೀರು ಕೊನೆ ಭಾಗಕ್ಕೆ ತಲುಪಲೇ ಇಲ್ಲ. ಸರ್ಕಾರ ನಾಲಾ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿಲ್ಲ, ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿಲ್ಲ, ಎಂಜಿನಿಯರ್, ನೀರುಗಂಟಿಯೂ ಇಲ್ಲದೆ ನೀರು ಹೇಗೆ ಕೊನೆ ಭಾಗ ತಲುಪುತ್ತದೆ’ ಎಂದು ಹೊಳೆಸಿರಿಗೆರೆ ಫಾಲಾಕ್ಷಪ್ಪ, ತಿಪ್ಪೆರುದ್ರಪ್ಪ ಪ್ರಶ್ನಿಸಿದರು.
‘ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಹೆಚ್ಚು ಬೆಲೆ ಇರುವ ಸಣ್ಣ ಭತ್ತದ ಮಾದರಿ ಶ್ರೀರಾಮ್ ಸೋನಾ ಬೆಳೆಯಲು ನಿರ್ಧಾರ ಮಾಡಿದ್ದೇನೆ’ ಎಂದು ಶಂಭುಲಿಂಗಯ್ಯ, ಗದಿಗೆಪ್ಪ ಪೂಜಾರ್ ಹೇಳಿದರು.
‘ಇಲ್ಲಿನ ಭೂಮಿಯಲ್ಲಿ ಭತ್ತ ಬೆಳೆಯಲೇಬೇಕಿದೆ, ಪರಿವರ್ತನೆ ಮಾಡುವುದು ಕಷ್ಟ’ ಎನ್ನುತ್ತಾರೆ ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಆಂಜನೇಯ.
‘ಭತ್ತ ಬೆಳೆಯಲು ಖರ್ಚು ಹೆಚ್ಚಾಗಿದೆ. ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ, ಯಾಂತ್ರೀಕೃತ ಕೃಷಿ ಪದ್ಧತಿ ಅನಿವಾರ್ಯ’ ಪ್ರಭುದೇವ, ಕೃಷಿಕರು, ನಿಟ್ಟೂರು.
‘ಭದ್ರಾ ಯೋಜನ ವಲಯದ ಎಸ್.ಇ ಭೇಟಿ ನೀಡಿ ಹೂಳು ಎತ್ತಿಸುವ ಭರವಸೆ ನೀಡಿದ್ದಾರೆ. ಒಂದೆರಡು ದಿನ ಕಾದು ನೋಡೋಣ. ನಂತರ ಮುಂದಿನ ನಿರ್ಧಾರ ಮಾಡೋಣ’ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.