ADVERTISEMENT

ಹೊರಗುತ್ತಿಗೆ ನೌಕರರ ಪ್ರತಿಭಟನೆ: ಭದ್ರಾ ನಾಲೆ ನೀರು ನಿಲ್ಲುವ ಆತಂಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 2:54 IST
Last Updated 29 ಸೆಪ್ಟೆಂಬರ್ 2023, 2:54 IST
ಮಲೇಬೆನ್ನೂರು ಸಮೀಪದ ಕೋಮಾರನಹಳ್ಳಿ ಭದ್ರಾ ನಾಲೆ ಪಿಯರ್‌ ಗೇಜ್‌ ಗುರುವಾರ 3 ಅಡಿ ನೀರಿನ ಹರಿವಿನ ಪ್ರಮಾಣ ತೋರಿಸುತ್ತಿದೆ
ಮಲೇಬೆನ್ನೂರು ಸಮೀಪದ ಕೋಮಾರನಹಳ್ಳಿ ಭದ್ರಾ ನಾಲೆ ಪಿಯರ್‌ ಗೇಜ್‌ ಗುರುವಾರ 3 ಅಡಿ ನೀರಿನ ಹರಿವಿನ ಪ್ರಮಾಣ ತೋರಿಸುತ್ತಿದೆ   

ಮಲೇಬೆನ್ನೂರುಪ್ರಸಕ್ತ ಮಳೆಗಾಲದ ಹಂಗಾಮಿಗೆ 2ನೇ ಸರದಿಗೆ ಭದ್ರಾ ಮುಖ್ಯನಾಲೆಗೆ ನೀರು ಬಿಡುಗಡೆ ಮಾಡಿದ್ದು, ನೀರು ನಿಧಾನಗತಿಯಲ್ಲಿ ಹರಿದು ಬರುತ್ತಿದೆ. ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸೆಪ್ಟೆಂಬರ್‌ 29ರಿಂದ ಹೊರಗುತ್ತಿಗೆ ನೌಕರರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಇದರಿಂದ ಭದ್ರಾ ನಾಲೆಗೆ ನೀರು ಬಂದರೂ ಗದ್ದೆ, ತೋಟಗಳಿಗೆ ಹರಿದು ಬರುವುದು ವಿಳಂಬವಾಗಬಹುದು ಎಂಬ ಆತಂಕ ರೈತರದ್ದು.

ಆನ್‌ ಆಫ್‌ ಪದ್ಧತಿ ಜಾರಿಗೊಳಿಸಿದ ನಂತರ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡಿ ನೀರು ಹರಿಸಲಾಗುತ್ತಿದೆ. ಇದರಿಂದ ನಾಲೆಗೆ ನೀರು ನಿಧಾನವಾಗಿ ಬರುತ್ತಿದೆ. ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ಪ್ರತಿಭಟನೆಗೆ ನಿರ್ಧರಿಸಿರುವುದರಿಂದ ಗೇಟ್‌ ತೆರೆಯಲು ಹಾಗೂ ಮುಚ್ಚಲು ಸಿಬ್ಬಂದಿ ಇರುವುದಿಲ್ಲ. ನೀರು ಬಿಡುಗಡೆ ಮಾಡಿದರೂ ಜಮೀನಿಗೆ ಹರಿಯದೇ ಇರುವ ಆತಂಕ ಅಚ್ಚುಕಟ್ಟು ಭಾಗದ ಕೊನೆ ಭಾಗದ ರೈತರದ್ದು.

ಮೇಲ್ಬಾಗದಲ್ಲಿ ಮಳೆಯಾದರೆ ಮಾತ್ರ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ಇಲ್ಲವಾದರೆ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗುವುದು ಖಚಿತ. ಕೊನೆಭಾಗದ ರೈತರು ನಾಲೆ ನೀರಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ನಂದಿತಾವರೆ ಗ್ರಾಮದ ಶಂಭುಲಿಂಗಪ್ಪ, ರೇವಣಸಿದ್ದೇಶ್, ಗದ್ದಿಗೆಪ್ಪ.

ADVERTISEMENT

ಈಗಾಗಲೇ ಬಸವಾಪಟ್ಟಣ ಉಪವಿಭಾಗದ 8,9ನೇ ಉಪನಾಲೆಗೆ ಸೇರಿದ ಕುಣಿಬೆಳಕೆರೆ, ಮಲ್ಲನಾಯಕನಹಳ್ಳಿ, ಬೂದಿಹಾಳು, ನಿಟ್ಟೂರು, 10ನೇ ಉಪವಿಭಾಗದ ವಿನಾಯಕ ನಗರ ಕ್ಯಾಂಪ್‌, ಕಾಮಲಾಪುರ ಭಾಗದ ಭತ್ತದ ಬೆಳೆ ನೀರಿಲ್ಲದೆ ಒಣಗಿ ಭೂಮಿ ಬಿರುಕು ಕಾಣಿಸಿಕೊಂಡಿದೆ. ನೀರು ಸಿಗದಿದ್ದರೆ ಪರಿಸ್ಥಿತಿ ಬಿಗಡಲಾಯಿಸುವುದು ಖಚಿತ ಎನ್ನುತ್ತಾರೆ ಕೃಷಿಕ ಶೇಖರಪ್ಪ.

ನೀರುಗಂಟೆ ಸಮಸ್ಯೆ:

ಹೊರಗುತ್ತಿಗೆ ನೌಕರರ ಬಾಕಿ ವೇತನ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಯ ಪತ್ರಕ್ಕೆ ಗುತ್ತಿಗೆದಾರರು ಸಹಿ ಮಾಡಿಲ್ಲ. ಕೆಲವು ನಿಬಂಧನೆ ವಿಧಿಸಿದ್ದಾರೆ. ಹೀಗಾಗಿ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ ಎಂದು ನೌಕರರ ಸಂಘಟನೆ ಅಧ್ಯಕ್ಷ ಎ.ಕೆ. ಆಂಜನೇಯ ತಿಳಿಸಿದರು.

ಇಲ್ಲಿನ 2 ಕಚೇರಿಗೆ ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಎಇ, ಜೆಇ, ಕೆಲಸ ನಿರೀಕ್ಷಕರು ಹಾಗೂ ಸೌಡಿ ಹುದ್ದೆಗಳು ಖಾಲಿ ಇವೆ. ನೀರಾವರಿ ಕೆಲಸದ ನುರಿತ ಸಿಬ್ಬಂದಿಯೂ ಇಲ್ಲ. ಇದೂ ಸಮಸ್ಯೆ ಹೆಚ್ಚಲು ಕಾರಣವಾಗಿದೆ.

ನಾಲೆ ನೀರಿನ ಸಮಸ್ಯೆ ಉಲ್ಬಣಿಸಿದ್ದು, ನಾಲೆಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುವುದು ಅನುಮಾನ. ನೀರಿನ ನಿರ್ವಹಣೆ ಸಮಸ್ಯೆ ತಲೆದೋರಲಿದೆ. ಇದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ರೈತರಾದ ಹೊಳೆಸಿರಿಗೆರೆ ಫಾಲಾಕ್ಷಪ್ಪ, ಭಾನುವಳ್ಳಿ ಕೊಟ್ರೇಶ್‌, ಚಕ್ಕಡಿ ಚಂದ್ರಪ್ಪ, ಹೊಸಳ್ಳಿ ಕರಿಬಸಪ್ಪ ಅಳಲು ತೋಡಿಕೊಂಡರು.

ಮಲೇಬೆನ್ನೂರಿನ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗದ ವ್ಯಾಪ್ತಿಯ ಉಪವಿಭಾಗಗಳ ಹೊರಗುತ್ತಿಗೆ ನೌಕರರು ಪ್ರತಿಭಟನೆ ಸಂಬಂಧ ಗುರುವಾರ ಸಭೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.