ಲಕ್ಕವಳ್ಳಿಯ ಭದ್ರಾ ಜಲಾಶಯ
(ಸಂಗ್ರಹ ಚಿತ್ರ)
ದಾವಣಗೆರೆ: ಕಳೆದ ವರ್ಷದ ಭೀಕರ ಬರ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ರೈತರಿಗೆ ಪ್ರಸಕ್ತ ಮುಂಗಾರು ಸಂತಸವುಂಟು ಮಾಡಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯದ ನೀರಿನ ಮಟ್ಟ 162 ಅಡಿ ದಾಟುತ್ತಿದ್ದಂತೆ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಹಾಗೂ ಸಸಿ ಮಡಿ ಮಾಡಿಕೊಳ್ಳುವ ಕಾರ್ಯಕ್ಕೆ ಬೆಳೆಗಾರರು ಉತ್ಸುಕರಾಗಿದ್ದಾರೆ.
ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ 65,847 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತದೆ. 186 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದ ಮಟ್ಟ ಜುಲೈ 1ರಂದು 123 ಅಡಿ ಇತ್ತು. 20 ದಿನಗಳಲ್ಲಿ ಜಲಾಶಯಕ್ಕೆ 39 ಅಡಿ ನೀರು ಹರಿದು ಬಂದಿದ್ದು, ಒಂದೇ ವಾರದಲ್ಲಿ 25 ಅಡಿ ಏರಿಕೆ ಕಂಡಿದೆ. ಜೂನ್ ತಿಂಗಳಲ್ಲಿ ಭರವಸೆ ಮೂಡಿಸದ ಮುಂಗಾರು, ಎರಡು ವಾರಗಳಿಂದ ಚುರುಕು ಪಡೆದಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ 160ದಾಟಿದ ಬಳಿಕ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವುದು ವಾಡಿಕೆ. ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಚ್ಚುಕಟ್ಟು ಪ್ರದೇಶವಿದೆ. ಭತ್ತ ಬೆಳೆಯಲು ಭದ್ರಾ ಜಲಾಶಯದ ನೀರು ಅವಲಂಭಿಸಿರುವ ಕೃಷಿ ಭೂಮಿ ಇರುವುದು ದಾವಣಗೆರೆ ಜಿಲ್ಲೆಯಲ್ಲೇ ಹೆಚ್ಚು. ಭದ್ರೆಯ ಒಡಲು ಭರ್ತಿಯಾದಂತೆ ಜಿಲ್ಲೆಯ ರೈತರು ಹರ್ಷಗೊಳ್ಳುತ್ತಿದ್ದಾರೆ.
ಮಳೆ ಕೊರತೆಯ ಕಾರಣಕ್ಕೆ ಕಳೆದ ವರ್ಷ ಹಿಂಗಾರು ಹಂಗಾಮು ಭತ್ತದ ಬೆಳೆಗೆ ಜಲಾಶಯದ ನೀರು ಸಿಕ್ಕಿರಲಿಲ್ಲ. ಮುಂಗಾರು ಹಂಗಾಮಿನ ಭತ್ತಕ್ಕೂ ವಾಗ್ದಾನ ನೀಡಿದ ದಿನಗಳಷ್ಟು ನೀರು ಹರಿಸಿರಲಿಲ್ಲ. ಪ್ರಸಕ್ತ ಮುಂಗಾರಿನಲ್ಲಿ ರೈತರು ಆತಂಕದಿಂದಲೇ ಕೃಷಿ ಚಟುವಟಿಕೆ ಆರಂಭಿಸಿದ್ದರು. ಕೊಳವೆಬಾವಿ ಸೌಲಭ್ಯ ಹೊಂದಿದವರು ಹಾಗೂ ತುಂಗಭದ್ರಾ ನದಿಯ ಇಕ್ಕೆಲಗಳ ಕೃಷಿ ಭೂಮಿಯಲ್ಲಿ ಮಾತ್ರ ಭತ್ತದ ಸಸಿ ಮಡಿ ಸಿದ್ಧಪಡಿಸಲಾಗಿತ್ತು. ಉಳಿದ ರೈತರು ಜಲಾಶಯದ ಭರ್ತಿಗೆ ಮಳೆಯನ್ನು ಎದುರು ನೋಡುತ್ತಿದ್ದರು.
‘ಸಾಮಾನ್ಯವಾಗಿ ಜಲಾಶಯದ ನೀರಿನ ಮಟ್ಟ 160 ಅಡಿ ದಾಟಿದ ಬಳಿಕ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುತ್ತದೆ. ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಿಂದೆಲ್ಲ ಮಳೆ ಕೂಡ ನಿರಂತರವಾಗಿ ಸುರಿಯುತ್ತಿತ್ತು. ಹವಮಾನ ವೈಪರಿತ್ಯದ ಪರಿಣಾಮವಾಗಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಜಲಾಶಯದ ನೀರಿನ ಮಟ್ಟ 170 ಅಡಿ ತಲುಪಿದಾಗ ಅಥವಾ ಆಗಸ್ಟ್ ಮೊದಲ ವಾರ ನಾಲೆಗೆ ನೀರು ಹರಿಸಿದರೆ ಅನುಕೂಲ’ ಎಂಬುದು ರೈತ ಮುಖಂಡ ತೇಜಸ್ವಿ ಪಟೇಲ್ ಸಲಹೆ.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಶಾಂತಿಸಾಗರ (ಸೂಳೆಕೆರೆ) ಸೇರಿ ಬಹುತೇಕ ಕೆರೆ ಕಟ್ಟೆಗಳು, ಬ್ಯಾರೇಜ್, ಪಿಕ್‌ಅಪ್‌ಗಳು ಭದ್ರಾ ಜಲಾಶಯದ ನೀರನ್ನೇ ಅವಲಂಬಿಸಿವೆ. ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ಭತ್ತ ಬೆಳೆಯುವ ಪ್ರದೇಶದ ರೈತರು ಭದ್ರಾ ನೀರಿಗೆ ಕಾಯುತ್ತಿದ್ದಾರೆ. ಭತ್ತ ನಾಟಿಗೆ ಜುಲೈ ತಿಂಗಳು ಪ್ರಾಶಸ್ತ್ಯ. ಆಗಸ್ಟ್ ಮೊದಲ ವಾರದವರೆಗೆ ಭತ್ತ ನಾಟಿಗೆ ಅವಕಾಶವಿದೆ. ನಾಟಿ ವಿಳಂಬವಾದರೆ ಇಳುವರಿ ಕಡಿಮೆಯಾಗುತ್ತದೆ ಎಂಬುದು ರೈತರ ಆತಂಕ.
‘ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಕುಸಿದಿರುವುದರಿಂದ ಕೊಳವೆಬಾವಿ ಕಡಿಮೆ. ಭತ್ತದ ಸಸಿ ಮಡಿಗೂ ರೈತರು ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಸಸಿ ಮಡಿ ಮಾಡಿದ ಬಳಿಕ ನಾಟಿಗೆ ಕನಿಷ್ಠ 20 ದಿನ ಕಾಯಬೇಕು. ಜಲಾಶಯಕ್ಕೆ ಒಳಹರಿವು ಉತ್ತಮವಾಗಿರುವುದರಿಂದ ನಾಲೆಗೆ ನೀರು ಹರಿಸಲು ಸಕಾಲ’ ಎಂಬುದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಲಿಂಗರಾಜ ಶಾಮನೂರು ಒತ್ತಾಯ.
ಮುಂಗಾರು ಹಂಗಾಮಿಗೆ ಸಾಮಾನ್ಯವಾಗಿ 110 ದಿನ ನಾಲೆಗೆ ನೀರು ಹರಿಸುವ ವಾಡಿಕೆ ಇದೆ. ದೀರ್ಘಾವಧಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದ ಜಿಲ್ಲೆಯ ರೈತರು ನಾಲೆ ನೀರಿನ ಲಭ್ಯತೆಯ ದಿನಗಳು ಕಡಿಮೆಯಾಗಿದ್ದರಿಂದ ಅಲ್ಪಾವಧಿ ತಳಿಯ ಭತ್ತವನ್ನು ನಾಟಿ ಮಾಡತೊಡಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಾಗಿ ಆರ್‌ಎನ್‌ಆರ್ ತಳಿಯ ಭತ್ತ ಹೆಚ್ಚಾಗಿ ನಾಟಿಯಾಗುತ್ತದೆ. ಸಸಿ ಮಡಿ ಮಾಡಿಕೊಳ್ಳಲು ಭತ್ತದ ಬೀಜದ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ.
ಭದ್ರಾ ಜಲಾಶಯದ ನೀರಿಮ ಮಟ್ಟ ಹೆಚ್ಚಾಗಿದ್ದು ಆಶಾದಾಯಕ ಬೆಳವಣಿಗೆ. ಭತ್ತದ ನಾಟಿ ಸಸಿ ಮಡಿ ಮಾಡಿಕೊಳ್ಳಲು ರೈತರು ಸಜ್ಜಾಗುತ್ತಿದ್ದಾರೆ. ನೀರಿನ ಮಿತ ಬಳಕೆಗೆ ಹೆಚ್ಚು ಗಮನ ಹರಿಸಿದರೆ ಅನುಕೂಲ.ತೇಜಸ್ವಿ ಪಟೇಲ್, ರೈತ ಮುಖಂಡ
ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ನೀರಿನ ಒಳಹರಿವು ಜಲಾಶಯ ಭರ್ತಿಯಾಗುವ ಭರವಸೆ ಮೂಡಿಸಿದೆ. ಜಲಾಶಯದ ನೀರನ್ನು ನದಿಗೆ ಹರಿಸುವ ಮುನ್ನ ನಾಲೆಗೆ ಬಿಟ್ಟರೆ ಒಳಿತು.ಎಚ್.ಆರ್.ಲಿಂಗರಾಜ, ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಯ ರೈತ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.