ADVERTISEMENT

‘ಬಿಜೆಪಿ ಆಡಳಿತಕ್ಕೆ ಜನಮನ್ನಣೆ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 2:49 IST
Last Updated 4 ಜನವರಿ 2021, 2:49 IST
ಎಚ್.ಸಿ. ಮಹೇಶ್
ಎಚ್.ಸಿ. ಮಹೇಶ್   

ಜಗಳೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 29 ಗ್ರಾಮ ಪಂಚಾಯಿತಿಗಳಲ್ಲಿ 20ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಬಿಜೆಪಿ ವಶವಾಗಲಿವೆ ಎಂದು ಬಿಜೆಪಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಸಿ. ಮಹೇಶ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ‘ಕ್ಷೇತ್ರ ವ್ಯಾಪ್ತಿಯಲ್ಲಿಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 320ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ 20 ಪಂಚಾಯಿತಿಗಳಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿರುವುದು ನಿಶ್ಚಿತ. ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಪಕ್ಷದ ಬೆಂಬಲಿಗರ ಅಧಿಕೃತ ಪಟ್ಟಿ ಕೊಡಲು ಸಿದ್ಧ’ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ವಿ. ರಾಮಚಂದ್ರ ಅವರ ಸ್ಥಳೀಯ ಯೋಜನೆಗಳ ಅನುಷ್ಠಾನದ ಫಲವಾಗಿ ಪಕ್ಷದ ಬೆಂಬಲಿಗರು ಸಾಮೂಹಿಕ ಗೆಲುವು ಸಾಧಿಸಿದ್ದಾರೆ.ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಜಗಳೂರು ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವುದು ಸಾಧ್ಯವಿಲ್ಲ ಎಂಬ ಮಾಜಿ ಶಾಸಕ‌ ಎಚ್.ಪಿ ರಾಜೇಶ್ ಅವರ ಹೇಳಿಕೆ ಸರಿಯಲ್ಲ. ಪ್ರಸ್ತುತ ಪಟ್ಟಣದಲ್ಲಿ 17,534 ಜನಸಂಖ್ಯೆ ಹೊಂದಿದೆ. ಪುರಸಭೆಗೆ 20 ಸಾವಿರ ಜನಸಂಖ್ಯೆ ಅಗತ್ಯವಿದೆ. ಹೀಗಾಗಿ ಪಕ್ಕದ ಹಳ್ಳಿಗಳನ್ನು ಸೇರ್ಪಡೆಗೊಳಿಸುವ ಶಾಸಕರ ಹೇಳಿಕೆಯಲ್ಲಿ ವಾಸ್ತವಾಂಶ ಇದೆ. ‌ಪಟ್ಟಣ ಪುರಸಭೆಯಾಗುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಸಿರಿಗೆರೆ ಶ್ರೀಗಳ ಆಶೀರ್ವಾದ ಮತ್ತು ಶಾಸಕರು, ಸಂಸದರ ಇಚ್ಛಾಶಕ್ತಿಯಿಂದ ತಾಲ್ಲೂಕಿನ 57ಕೆರೆ ನೀರು ತುಂಬಿಸುವ ಯೋಜನೆಗೆ ₹ 640 ಕೋಟಿ ಹಣ ಮಂಜೂರಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಕುಡಿಯುವ ನೀರು ಪೂರೈಕೆ ಯೋಜನೆಯಡಿ ತಾಲ್ಲೂಕಿನ ಕನಿಷ್ಠ 2 ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಗೆ ನೀರು ತರುವ ನಿಟ್ಟಿನಲ್ಲಿ ಶಾಸಕ ರಾಮಚಂದ್ರ ಅವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ‌ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಸದಸ್ಯ ಎಸ್‌.ಕೆ. ಮಂಜುನಾಥ್, ಪಟ್ಟಣದ ಪಂಚಾಯಿತಿ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.