ADVERTISEMENT

ಬಿಜೆಪಿ ರಥಯಾತ್ರೆ ಸ್ವಾಗತಿಸಿದ ಮುಖಂಡರು

ಬೈಕ್‌ ರ‍್ಯಾಲಿಯಲ್ಲಿ ಹಾರಾಡಿದ ನೀಲಿ ಬಾವುಟ; ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 16:03 IST
Last Updated 12 ಏಪ್ರಿಲ್ 2025, 16:03 IST

ದಾವಣಗೆರೆ: ಬಿಜೆಪಿಯು ಬೆಂಗಳೂರಿನಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿವರೆಗೆ ಹಮ್ಮಿಕೊಂಡಿರುವ ‘ಭೀಮ ಹೆಜ್ಜೆ ರಥಯಾತ್ರೆ’ಯು ಜಿಲ್ಲೆಗೆ ಶನಿವಾರ ಆಗಮಿಸಿತು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಪ್ಪಾಣಿ ಕ್ಷೇತ್ರದಲ್ಲಿ ಭಾಷಣ ಮಾಡಿದ ದಿನಕ್ಕೆ 100 ವರ್ಷ ತುಂಬಿರುವ ಪ್ರಯುಕ್ತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗದ ಮೂಲಕ ಆಗಮಿಸಿದ ರಥಯಾತ್ರೆಯನ್ನು ಮಾಯಕೊಂಡ ಕ್ಷೇತ್ರದ ಆನಗೋಡಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ–4ರ ಬಳಿಯ ಸರ್ಕೀಟ್‌ ಹೌಸ್ ಬಳಿಗೆ ಸಾಗಿದರು. ಅಲ್ಲಿಂದ ಎಲ್ಲರೂ ಒಗ್ಗೂಡಿ ಹದಡಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಬೈಕ್ ರ‍್ಯಾಲಿ ನಡೆಸಿದರು.

ADVERTISEMENT

ನೂರಾರು ಬೈಕ್‌ಗಳಲ್ಲಿ ಸಾಗಿಬಂದ ಮುಖಂಡರು, ಕಾರ್ಯಕರ್ತರು ನೀಲಿ ಬಾವುಟ ಹಿಡಿದು ಸಂಭ್ರಮಿಸಿದರು. ಅಂಬೇಡ್ಕರ್ ಪರ ಜೈಕಾರ ಕೂಗಿದರು. ಅಂಬೇಡ್ಕರ್ ಮೂರ್ತಿಗೆ ಪಕ್ಷದ ನಾಯಕರು ಮಾಲಾರ್ಪಣೆ ಮಾಡಿದರು. ಹಾಲಿನ ಅಭಿಷೇಕವನ್ನೂ ನೆರವೇರಿಸಿದರು. ಇಡೀ ವೃತ್ತ ಕೆಲ ಕಾಲ ನೀಲಿಮಯವಾಗಿತ್ತು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಹರಿಹರದ ಮೂಲಕ ಹಾವೇರಿ ಜಿಲ್ಲೆಗೆ ರಥಯಾತ್ರೆಯನ್ನು ಬೀಳ್ಕೊಟ್ಟರು.

ಪಕ್ಷದ ಕಾರ್ಯಕರ್ತರು, ಸಾರ್ವಜನಿಕರಿಗೆ ಅಂಬೇಡ್ಕರ್ ವೃತ್ತದಲ್ಲಿ ಮಜ್ಜಿಗೆ ವಿತರಿಸಲಾಯಿತು. ಬೆಳಿಗ್ಗೆ 11 ಗಂಟೆಗೆ ಬರಬೇಕಿದ್ದ ರಥಯಾತ್ರೆಯು ಮಧ್ಯಾಹ್ನ 1.30ರ ಬಳಿಕ ಅಂಬೇಡ್ಕರ್ ವೃತ್ತ ತಲುಪಿತು. ರಥಯಾತ್ರೆಯು ಏಪ್ರಿಲ್ 15ರಂದು ನಿಪ್ಪಾಣಿ ತಲುಪಲಿದೆ. ಅಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮುಖಂಡರಾದ ಪ್ರಶಾಂತ್, ಧನಂಜಯ ಕಡ್ಲೇಬಾಳು, ಶ್ರೀನಿವಾಸದಾಸ ಕರಿಯಪ್ಪ, ಪ್ರಸನ್ನಕುಮಾರ್, ಓದೋಗಂಗಪ್ಪ, ಹನುಮಂತ ನಾಯ್ಕ, ಆಲೂರು ಲಿಂಗರಾಜ, ಶಿವಾನಂದ, ಜಿ.ವಿ.ಗಂಗಾಧರ, ಕರಿಯಣ್ಣ, ಆನಂದ, ಹರೀಶ್, ಮಂಜಾನಾಯ್ಕ, ವಿಶ್ವಾಸ್ ಸೇರಿದಂತೆ ಇನ್ನಿತರ ಹಲವು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.