ADVERTISEMENT

ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ: ಮಾಜಿ ಸಚಿವ ಎಚ್. ಆಂಜನೇಯ

ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:49 IST
Last Updated 1 ಡಿಸೆಂಬರ್ 2021, 5:49 IST
ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು
ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು   

ಹೊಳಲ್ಕೆರೆ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಯಾವುದೇ ಅನುಕೂಲ ಮಾಡದ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಪಟ್ಟಣದ ಶಾದಿ ಮಹಲ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬಡವರಿಗೆ ವಸತಿ ಕಲ್ಪಿಸಿಲ್ಲ. ವೃದ್ಧರಿಗೆ ಮಾಸಾಶನ ನೀಡಲು ಸರ್ಕಾರದಲ್ಲಿ ಹಣವಿಲ್ಲ ಎಂದು ಆರೋಪಿಸಿದರು.

ADVERTISEMENT

ಕಾಂಗ್ರೆಸ್ ಪಕ್ಷ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚು ಸೌಲಭ್ಯ ಕಲ್ಪಿಸಿದೆ. ಸರ್ಕಾರದ ಅನುದಾನದ ಚೆಕ್ ಮೇಲೆ ಸಹಿ ಮಾಡುವ ಅಧಿಕಾರ ಯಾವ ಜನಪ್ರತಿನಿಧಿಗೂ ಇಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಚೆಕ್ ಮೇಲೆ ಸಹಿ ಮಾಡುವ ಅಧಿಕಾರವನ್ನು ಕಾಂಗ್ರೆಸ್‌ ನೀಡಿದೆ. ದಾವಣಗೆರೆ ಚಿತ್ರದುರ್ಗ ಎರಡೂ ಜಿಲ್ಲೆಗಳ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿದ್ದಾರೆ. ಆದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಹೆಚ್ಚಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಕೋರಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ‘ಬಿಜೆಪಿಯವರು ಧರ್ಮದ ಹೆಸರು ಹೇಳಿಕೊಂಡು ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಾರೆ. ಧರ್ಮ, ಜಾತಿಗಳ ಮಧ್ಯದಲ್ಲಿ ಕಲಹ ಏರ್ಪಡಿಸಿ ಅನುಕೂಲ ಪಡೆದುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಮತದಾರರು ರೈತ ವಿರೋಧಿ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ನಮ್ಮ ಕಾರ್ಯಕರ್ತರು ಸೋಮಶೇಖರ್ ಗೆಲುವಿಗೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ’ ಎಂದರು.

ಚಳ್ಳಕೆರೆ ಶಾಸಕ ರಘು ಮೂರ್ತಿ, ‘ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಾವು ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಅಭಿವೃದ್ಧಿಯ ವಿಷಯದಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ವಾಣಿವಿಲಾಸ ಸಾಗರಕ್ಕೆ ನೀರು ಹರಿಯುವಂತೆ ಮಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ‘ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್, ಮಾಜಿ ಶಾಸಕರಾದ ಎ.ವಿ.ಉಮಾಪತಿ, ಬಿ.ಜಿ.ಗೋವಿಂದಪ್ಪ, ಎಸ್. ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜೆಜೆ ಹಟ್ಟಿ ಡಾ.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ, ಫಾತ್ಯರಾಜನ್, ಶಶಿಕಲಾ ಸುರೇಶ್ ಬಾಬು, ಆರ್. ನರಸಿಂಹರಾಜು, ಡಿ.ಕೆ. ಶಿವಮೂರ್ತಿ, ಬಿ. ಗಂಗಾಧರ್, ಯೋಗೀಶ್ ಬಾಬು, ಕೃಷ್ಣಮೂರ್ತಿ, ಡಾ. ಅನಂತ್, ಗೀತಾ ನಂದಿನಿಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್, ತಾಲ್ಲೂಕು ಘಟಕದ ಅಧ್ಯಕ್ಷ ರಂಗಸ್ವಾಮಿ, ಸಂಪತ್ ಕುಮಾರ್, ಮೋಹನ್ ನಾಗರಾಜ್, ಡಿ.ಎನ್. ಮೈಲಾರಪ್ಪ, ಮಜರ್, ಸಜಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.