ADVERTISEMENT

ಜನರಿಗೆ ಪ್ರಯೋಜನವಿಲ್ಲದ ಬಿಜೆಪಿ ಕಾರ್ಯಕಾರಿಣಿ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:04 IST
Last Updated 22 ಸೆಪ್ಟೆಂಬರ್ 2021, 4:04 IST
   

ದಾವಣಗೆರೆ: ಜನರನ್ನು ಮರುಳು ಮಾಡಿ ಹೇಗೆ ಚುನಾವಣೆಯಲ್ಲಿ ಗೆಲ್ಲಬೇಕು? ಹೇಗೆ ಅಧಿಕಾರ ಹಿಡಿಯಬೇಕು ಎಂದು ಚರ್ಚಿಸಲಷ್ಟೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆದಿದೆ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಯಾವ ಚರ್ಚೆಯೂ ನಡೆಯದ ಜನವಿರೋಧಿ ಕಾರ್ಯಕಾರಿಣಿ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಟೀಕಿಸಿದರು.

ಕೋವಿಡ್ ಕಾರಣದಿಂದ ಜನತೆ ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಹೀಗಾಗಿ, ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಕಾರ್ಯಕಾರಿಣಿಗೆ ಕೋಟ್ಯಂತರ ಖರ್ಚು ಮಾಡಿದೆ. ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಸರ್ಕಾರಿ ವಾಹನಗಳಲ್ಲಿಯೇ ದಾವಣಗೆರೆಗೆ ಬಂದು ಕಾರ್ಯಕಾರಣಿಯಲ್ಲಿ ಭಾಗವಹಿಸಿ ಹೋಗಿದ್ದಾರೆ. ಇದಕ್ಕೆ ಸರ್ಕಾರದ ಇಂಧನ ಬಳಸಲಾಗಿದೆ. ಅವರಿಗೆ ಸರ್ಕಾರಿ ಖರ್ಚಿನಲ್ಲಿಯೇ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೀಗಾಗಿ, ಇದು ಸರ್ಕಾರದ ಹಣದಲ್ಲಿಯೇ ನಡೆದ ಕಾರ್ಯಕಾರಣಿಯಾಗಿದೆ ಎಂದು ಆಪಾದಿಸಿದರು.

ADVERTISEMENT

ಮಹಾನಗರ ಪಾಲಿಕೆಯ 700 ಜನ ಪೌರ ಕಾರ್ಮಿಕರು ಒಂದು ವಾರದ ಕಾರ್ಯಕಾರಣಿಗೆ ಸಂಬಂಧಿಸಿದ ಸ್ವಚ್ಛತೆ ಮಾಡಿದ್ದಾರೆ. ಯಾವ ವಾರ್ಡ್‌ಗಳಿಗೂ ಹೋಗಿಲ್ಲ. ಇದರಿಂದ ವಾರ್ಡ್‌ಗಳು ಕಸದ ಕೊಂಪೆಯಾಗಿವೆ ಎಂದು ದೂರಿದರು.

ಸತ್ಯ ಒಪ್ಪಿರುವ ಬಿಎಸ್‍ವೈ: ವಿರೋಧ ಪಕ್ಷವನ್ನು ಹಗುರವಾಗಿ ಪರಿಗಣೀಸಬೇಡಿ ಎಂದು ಎಂದು ಕಾರ್ಯಕಾರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಸರಿ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ನಿಜ. ಈ ಸತ್ಯವನ್ನು ಅವರು ಹೇಳಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಕೆ.ಚಮನ್‍ಸಾಬ್, ಮಂಜುನಾಥ ಗಡಿಗುಡಾಳ್ ಹಾಜರಿದ್ದರು.

ಎಎಸ್‌ಎಂ ಹುಟ್ಟಿದ ದಿನ ಪ್ರಯುಕ್ತ ಇಂದು ಹಲವು ಕಾರ್ಯಕ್ರಮ

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜನ್ಮ ದಿನದ ಪ್ರಯುಕ್ತ ನಗರದಲ್ಲಿ ಸೆ.22ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ತಿಳಿಸಿದರು.

ಬೆಳಿಗ್ಗೆ 9ಕ್ಕೆ ಹಿರಿಯ ವನಿತೆಯರ ಆನಂಧಾಮದಲ್ಲಿ ಉಪಾಹಾರ ಮತ್ತು ಮಧ್ಯಾಹ್ನ 1ಕ್ಕೆ ಊಟದ ವ್ಯವಸ್ಥೆ ಮಾಡಲಾಗುವುದು. ಬೆಳಿಗ್ಗೆ 10.30ಕ್ಕೆ ಐಎಂಎ ಹಾಲ್‍ನಲ್ಲಿ ಪಾಲಿಕೆ ಸದಸ್ಯರು ಸೇರಿ ಒಟ್ಟು 54 ಮಂದಿ ರಕ್ತದಾನ ಮಾಡಲಿದ್ದಾರೆ. ಕೇಕ್ ಕತ್ತರಿಸುವ ಮೂಲಕ ಮಲ್ಲಿಕಾರ್ಜುನ ಅವರು ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ ಎಂದರು.

ನಗರದ ಐಎಂಎ ಹಾಲ್, ನಿಟುವಳ್ಳಿ, ಬಕ್ಕೇಶ್ವರ ಶಾಲೆ, ಯರಗುಂಟೆ, ದುರ್ಗಾಂಬಿಕ ದೇವಸ್ಥಾನದಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ನಗರದ ಕಲ್ಲೇಶ್ವರ ಮಿಲ್‍ನಲ್ಲಿ ಪಾಲಿಕೆ ಹಿರಿಯ ಸದಸ್ಯ ಕೆ. ಚಮನ್ ಸಾಬ್ ಅವರ ಅಪೇಕ್ಷೆಯ ಮೇರೆಗೆ 54 ಕೆ.ಜಿ ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಮಲ್ಲಿಕಾರ್ಜುನ ಅವರು ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.