ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ: ‘ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಬಿ.ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯಬೇಕು. ಅವರ ವಿರುದ್ಧ ದನಿ ಎತ್ತುತ್ತಿರುವ ಭಿನ್ನಮತೀಯರ ವಿರುದ್ಧವೇ ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಫೆ.5ರಂದು ಸಭೆ ನಡೆಸುತ್ತೇವೆ’ ಎಂದು ಮಾಜಿ ಸಚಿವ ಎ.ಪಿ. ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ಭಿನ್ನಮತೀಯರ ವಿರುದ್ಧ ಹೇಗೆ ಹೋರಾಟ ರೂಪಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ. ನಾವೆಲ್ಲ ವಿಜಯೇಂದ್ರ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲುತ್ತೇವೆ’ ಎಂದರು.
‘ಭಿನ್ನಮತೀಯರು ದೆಹಲಿ ದಂಡಯಾತ್ರೆ ಮಾಡುತ್ತಿದ್ದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ವಿಜಯೇಂದ್ರ ಏನು ಎಂಬುದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಭಿನ್ನಮತೀಯರ ವಿರುದ್ಧ ಕ್ರಮ ಆಗಬೇಕು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಭಿನ್ನಮತೀಯರು ಮಾನಸಿಕ ಅಸ್ವಸ್ಥರಾಗಿದ್ದು, ಬಿಜೆಪಿಯನ್ನು ಹಾಳು ಮಾಡಲೆಂದೇ ಈ ರೀತಿ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಮಾನ– ಮರ್ಯಾದೆ ಇದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿ’ ಎಂದು ಹೇಳಿದರು.
‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರ ಹೆಸರನ್ನು ಸುಖಾಸುಮ್ಮನೆ ಎಳೆದು ತರುತ್ತಿದ್ದಾರೆ. ಭಿನ್ನಮತೀಯರ ತಲೆಹರಟೆ ಜಾಸ್ತಿಯಾಗಿದ್ದು, ದೆಹಲಿಗೆ ಹೋಗಲು ನಾವೂ ಸಿದ್ಧರಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.