ADVERTISEMENT

ಮೋದಿ ಸ್ವಾಗತಿಸಲು ಕೇಸರಿಮಯವಾದ ದಾವಣಗೆರೆ

ಭದ್ರತೆ ಪರೀಕ್ಷಿಸುತ್ತಿರುವ ಭದ್ರತಾ ತಂಡ * ಹಾರಾಡುತ್ತಿರುವ ಸೇನಾ ಹೆಲಿಕಾಫ್ಟರ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:50 IST
Last Updated 24 ಮಾರ್ಚ್ 2023, 5:50 IST
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭಕ್ಕೆ ಭಾಗವಹಿಸಲು ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಎಂಐಟಿ ಮೈದಾನದಲ್ಲಿ ಸೇನಾ ಹೆಲಿಕಾಪ್ಟರ್ ನಡೆಸಿದ ತಾಲೀಮಿನ ನೋಟ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭಕ್ಕೆ ಭಾಗವಹಿಸಲು ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಎಂಐಟಿ ಮೈದಾನದಲ್ಲಿ ಸೇನಾ ಹೆಲಿಕಾಪ್ಟರ್ ನಡೆಸಿದ ತಾಲೀಮಿನ ನೋಟ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ದಾವಣಗೆರೆ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ‘ಮಹಾಸಂಗಮ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಧ್ವಜ, ಬಿಜೆಪಿ ಬಾವುಟ, ನರೇಂದ್ರ ಮೋದಿಗೆ ಸ್ವಾಗತಕೋರುವ ಬ್ಯಾನರ್‌ಗಳಿಂದ ತುಂಬಿ ಹೋಗಿದೆ.

ಸಿದ್ಧತೆಯ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರು ಬರಲಿದ್ದಾರೆ. ಅದರಲ್ಲಿ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಗದಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದಲೇ ಅಧಿಕ ಸಂಖ್ಯೆಯಲ್ಲಿ ಬರಲಿದ್ದಾರೆ. ಅದರಲ್ಲಿ ದಾವಣಗೆರೆ ಜಿಲ್ಲೆಯಿಂದ 3 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಒಟ್ಟು 10 ಲಕ್ಷ ದಾಟಲಿದೆ. 10,000 ಬಸ್‌ಗಳು, 25 ಸಾವಿರ ಬೈಕ್‌ಗಳು, ಅಸಂಖ್ಯ ಟ್ರ್ಯಾಕ್ಟರ್‌, ಕಾರ್‌ ಸಹಿತ ವಿವಿಧ ವಾಹನಗಳಲ್ಲಿ ಜನರು ಬರಲಿದ್ದಾರೆ ಎಂದು ವಿವರ ನೀಡಿದರು.

ADVERTISEMENT

ಜಿಎಂಐಟಿ ಕಾಲೇಜಿನ ಪಕ್ಕದಲ್ಲಿ 400 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ- ರಾಜ್ಯದ ಸಚಿವರು, ಇತರ ಪ್ರಮುಖರು ಭಾಗವಹಿಸುತ್ತಾರೆ ಎಂದು ತಿಳಿಸಿದರು.

4 ವಿಜಯ ಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿವೆ. 5,600 ಕಿಮೀಗಳನ್ನು ಒಟ್ಟು ಯಾತ್ರೆ ಮೂಲಕ ಕ್ರಮಿಸಲಾಗಿದೆ. ಯಾತ್ರೆ ಹೋದಲೆಲ್ಲ ಜನ ಸೇರಿದ್ದರು. ಎಲ್ಲ 224 ಕ್ಷೇತ್ರಗಳನ್ನೂ ತಲುಪಿದ್ದೇವೆ. ಬಿಜೆಪಿ ಪರ ಅಲೆ ಸೃಷ್ಟಿಯಾಗಿದೆ. ನಾಲ್ಕು ರಥಗಳು ದಾವಣಗೆರೆಗೆ ತಲುಪಿವೆ. ಮಾರ್ಚ್‌ 24ರಂದು ಈ ರಥಗಳು ದಾವಣಗೆರೆಯಲ್ಲಿ ರೋಡ್‌ಶೋ ಮಾಡಲಿವೆ ಎಂದು ವಿವರಿಸಿದರು.

3 ವೇದಿಕೆ: ಮಾರ್ಚ್‌ 25ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಮಹಾಸಂಗಮ ಕಾರ್ಯಕ್ರಮದಲ್ಲಿ ಮೂರು ವೇದಿಕೆಗಳಿರಲಿವೆ. ಪ್ರಮುಖ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಪ್ರಮುಖ 100 ಮಂದಿಗೆ ಆಸನ ವ್ಯವಸ್ಥೆ ಇರುತ್ತದೆ. ಹಾಲಿ ಶಾಸಕರು, ಸಂಸದರು ಸಹಿತ ಪ್ರಮುಖರು ಎರಡನೇ ವೇದಿಕೆಯಲ್ಲಿ ಇರುತ್ತಾರೆ. ಮಾಜಿ ಶಾಸಕರು, ಪಕ್ಷದ ಪ್ರಮುಖ ಪದಾಧಿಕಾರಿಗಳು ಮೂರನೇ ವೇದಿಕೆಯಲ್ಲಿರುತ್ತಾರೆ ಎಂದರು.

2 ಲಕ್ಷ ಕುರ್ಚಿಗಳನ್ನು ಹಾಕಲಾಗುತ್ತದೆ. ಅದರ ಹೊರಗೆ ಲಕ್ಷಾಂತರ ಮಂದಿ ನಿಂತು ನೋಡಲು 40 ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. 10 ಲಕ್ಷ ಮಜ್ಜಿಗೆ ವಿತರಿಸಲಾಗುತ್ತದೆ. ಎಲ್ಲ ಕಡೆಗಳಲ್ಲಿ ನೀರಿನ ವ್ಯವಸ್ಥೆ ಇರುತ್ತದೆ ಎಂದರು.

ಮಾರ್ಚ್‌ 25ರಂದು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ ಉಪ್ಪಿಟು, ಕೇಸರಿಬಾತ್‌, ಮಧ್ಯಾಹ್ನ ಗೋಧಿ ಪಾಯಸ, ಮೊಸರನ್ನ, ಪಲಾವು ಇರಲಿದೆ. 400 ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

ಸಮಾವೇಶದಿಂದ ಮೂರು ಕಿಲೋಮೀಟರ್‌ ವ್ಯಾಪ್ತಿಯ ಒಳಗೆ ಪಾರ್ಕಿಂಗ್‍ಗೆ 44 ಜಾಗಗಳನ್ನು ಗುರುತಿಸಲಾಗಿದೆ. ಕಾರ್ಯಾಲಯ, ಸ್ವಚ್ಛತೆ ಸೇರಿ ಹಲವು 45 ತಂಡಗಳನ್ನು ನಿಯೋಜಿಸಿದ್ದೇವೆ. 5 ಸಾವಿರ ಪ್ರಬಂಧಕರು ಇರಲಿದ್ದಾರೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್‌, ಪ್ರೊ. ಎನ್‌. ಲಿಂಗಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮುಖಂಡರಾದ ಬಸವರಾಜ ನಾಯ್ಕ್‌, ಡಿ.ಎಸ್‌. ಶಿವಶಂಕರ್‌, ಯಶವಂತರಾವ್‌ ಜಾಧವ್‌ ಮತ್ತಿತರರಿದ್ದರು.

ಭದ್ರತೆ ಪರೀಕ್ಷೆ

ಬಾಂಬ್ ಪತ್ತೆ ದಳವು ಕಾರ್ಯಕ್ರಮದ ಸ್ಥಳದಲ್ಲಿ ಬೀಡುಬಿಟ್ಟಿದೆ. ಸೇನಾ ಹೆಲಿಕಾಫ್ಟರ್‌ ಶಿವಮೊಗ್ಗ ವಿಮಾನ ನಿಲ್ದಾಣ ಮತ್ತು ಜಿಎಂಐಟಿ ಹೆಲಿಪ್ಯಾಡ್‌ಗೆ ಓಡಾಡುತ್ತಿದೆ. ಭದ್ರತೆಯ ಪರಿಶೀಲನೆ ನಿರಂತರವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.