ದಾವಣಗೆರೆ: ‘ವೀರೇಶ್ವರ ಪುಣ್ಯಾಶ್ರಮದಲ್ಲಿ ಜಾತಿ ತಾರತಮ್ಯವಿಲ್ಲದೇ ಎಲ್ಲಾ ಸಮುದಾಯಗಳ ಮಕ್ಕಳಿಗೂ ಸಂಗೀತ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳು ನೀಡುವ ಒಂದು ರೂಪಾಯಿಯೂ ವ್ಯರ್ಥವಾಗುವುದಿಲ್ಲ. ದಾನದ ಹಣವನ್ನು ಅಂಧ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಬಳಸುತ್ತಿದ್ದೇವೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು.
ಇಲ್ಲಿನ ಬಾಡ ಕ್ರಾಸ್ ಬಳಿ ಇರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೆ ಮತ್ತು ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ವೀರೇಶ್ವರ ಪುಣ್ಯಾಶ್ರಮದಲ್ಲಿ 48 ಅಂಧ ಮಕ್ಕಳು ಸಂಗೀತ ಶಿಕ್ಷಣ ಕಲಿಯುತ್ತಿದ್ದಾರೆ. ಆ ಸಂಖ್ಯೆ 100 ಕ್ಕೆ ಏರಬೇಕು. ಸಂಗೀತ ಕಲಿಯುವ ಆಸೆಯೊಂದಿಗೆ ಬರುವ ಯಾವ ಅಂಧ ವಿದ್ಯಾರ್ಥಿಗೂ ಶಿಕ್ಷಣ ನಿರಾಕರಿಸುವುದಿಲ್ಲ’ ಎಂದರು.
‘ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಆಶ್ರಮದ ಅಭಿವೃದ್ಧಿಯೇ ಗುರಿಯಾಗಿತ್ತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಪುಣ್ಯಾಶ್ರಮವು ಗುರುತಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶ್ರಮವಹಿಸಿದೆ. ಆಶ್ರಮದ ಅಭಿವೃದ್ಧಿಗಾಗಿ ಯಾರ ಬಳಿಯೂ ದಾನ ಕೇಳುವುದಿಲ್ಲ. ಜನರೇ ಸ್ವಯಂಪ್ರೇರಿತವಾಗಿ ದಾನ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
‘ಬೆಂಗಳೂರಿನ ವಕೀಲೆ ಅಕ್ಕಮಹಾದೇವಿ ಎಂಬುವರು ಪುಣ್ಯಾಶ್ರಮಕ್ಕೆ ₹ 25 ಲಕ್ಷ ದಾನ ನೀಡಿದ್ದಾರೆ. ವಿಲ್‌ನಲ್ಲಿ ಅವರಿಗೆ ಸೇರಿದ ನಿವೇಶನವೊಂದನ್ನು ಪುಣ್ಯಾಶ್ರಮದ ಹೆಸರಿಗೆ ಬರೆದಿರುವುದು ಅವರ ಮರಣದ ಬಳಿಕ ತಿಳಿಯಿತು’ ಎಂದರು.
‘ರಾಜ್ಯ, ರಾಷ್ಟ್ರಮಟ್ಟದಲ್ಲಿ ಎಷ್ಟೇ ಪ್ರಶಸ್ತಿ ಬಂದರೂ, ನಾನು ಒಡನಾಡಿದ ಇಲ್ಲಿನ ಪುಣ್ಯಾಶ್ರಮ ನೀಡುವ ಗೌರವವೇ ಶ್ರೇಷ್ಠ’ ಎಂದು ರಂಗಭೂಮಿ ಕಲಾವಿದ ಚಿಂದೋಡಿ ಬಂಗಾರೇಶ್ ಹೇಳಿದರು.
‘ಅಂಧ ಅನಾಥರ, ದೀನ ದಲಿತರ ಸೇವೆಯ ಪರಮ ಸುಖ ಎಂದು ಪಂಚಾಕ್ಷರಿ ಗವಾಯಿ ಹೇಳಿದ್ದರು. ಸಮಾಜ ನಿನಗೆ ಏನು ಕೊಟ್ಟಿತು ಎಂಬುದು ಮುಖ್ಯವಲ್ಲ, ಸಮಾಜಕ್ಕೆ ನೀನು ಏನು ಕೊಟ್ಟೆ ಎಂಬುದು ಮುಖ್ಯ’ ಎಂದರು.
ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುಣ್ಯಾಶ್ರಮದ ಉಪಾಧ್ಯಕ್ಷ ದೇವರಮನಿ ಶಿವಕುಮಾರ, ಖಜಾಂಚಿ ಎಸ್.ಕೆ.ವೀರಣ್ಣ, ಟ್ರಸ್ಟಿಗಳಾದ ಜಿ.ಎಚ್.ಯಲ್ಲಪ್ಪ, ಎಸ್.ಜಿ.ಉಳವಯ್ಯ, ಎ.ಕೆ.ಪ್ರಶಾಂತ್, ದೇವರಮನಿ ಶಿವರಾಜ್, ಪ್ರಮುಖರಾದ ಮಹಾಲಿಂಗಪ್ಪ, ವೀರಭದ್ರಪ್ಪ, ವೇದಮೂರ್ತಿ, ರಮೇಶ್ ಧನ್ನೂರು, ಅಮರೇಶ ಶಾಸ್ತ್ರಿ, ಕುರ್ಕಿ ಮಂಜುನಾಥ್, ಸಿದ್ದಲಿಂಗಸ್ವಾಮಿ ಹಾಗೂ ಇನ್ನಿತರರಿದ್ದರು.
‘ಅಂಧರಿಗೆ ಬದುಕು ಕಟ್ಟಿಕೊಟ್ಟರು’
‘ಅಂಧತ್ವ ಇರುವವರು ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ಅಂಧರಿಗೆ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಪಂಚಾಕ್ಷರಿ ಗವಾಯಿ ಪುಟ್ಟರಾಜ ಕವಿ ಗವಾಯಿ ಅವರು ಮಾಡಿದ್ದಾರೆ’ ಎಂದು ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಹೇಳಿದರು.
‘ಸನಾತನ ಭಾರತದ ಪರಂಪರೆಯಲ್ಲಿ ನಾಗರಿಕತೆಗಿಂತಲೂ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂವಿಧಾನಬದ್ಧವಾಗಿ ಚೆನ್ನಾಗಿ ಬದುಕುವುದು ನಾಗರಿಕತೆಯಾದರೆ ಇನ್ನೊಬ್ಬರಿಗೂ ಬದುಕಟ್ಟು ಕಟ್ಟಿಕೊಡುವುದು ಸಂಸ್ಕೃತಿಯಾಗಿದೆ. ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.