ADVERTISEMENT

ಸ್ವಚ್ಛ ಭಾರತದ ಸಂಕಲ್ಪ ಕಾರ್ಯರೂಪಕ್ಕೆ ತನ್ನಿ

ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:23 IST
Last Updated 1 ಆಗಸ್ಟ್ 2019, 14:23 IST
ದಾವಣಗೆರೆಯ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ರಸಪ್ರಶ್ನೆ–2019 ಕಾರ್ಯಕ್ರಮವನ್ನು ಜಿ.ಪಂ. ಸಿಇಒ ಎಚ್. ಬಸವರಾಜೇಂದ್ರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಪ್ರಾಂಶುಪಾಲ ಶಿವಪ್ಪ ಜೆ., ಭೀಮಾನಾಯ್ಕ, ಪ್ರೊ. ಶಿವಪ್ರಕಾಶ್ ಪಿ. ಎಸ್., ಪ್ರೊ. ಸಿ. ಎಚ್. ಮುರಿಗೇಂದ್ರಪ್ಪ ಇದ್ದರು.
ದಾವಣಗೆರೆಯ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ರಸಪ್ರಶ್ನೆ–2019 ಕಾರ್ಯಕ್ರಮವನ್ನು ಜಿ.ಪಂ. ಸಿಇಒ ಎಚ್. ಬಸವರಾಜೇಂದ್ರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಪ್ರಾಂಶುಪಾಲ ಶಿವಪ್ಪ ಜೆ., ಭೀಮಾನಾಯ್ಕ, ಪ್ರೊ. ಶಿವಪ್ರಕಾಶ್ ಪಿ. ಎಸ್., ಪ್ರೊ. ಸಿ. ಎಚ್. ಮುರಿಗೇಂದ್ರಪ್ಪ ಇದ್ದರು.   

ದಾವಣಗೆರೆ: ಮುಂದಿನ ಪೀಳಿಗೆಗೆ ಸ್ವಚ್ಛ ಭಾರತವನ್ನು ಬಿಟ್ಟು ಹೋಗಬೇಕಿರುವುದು ನಮ್ಮ ಹೊಣೆ. ವಿದ್ಯಾರ್ಥಿಗಳು ಸ್ವಚ್ಛ ಭಾರತದ ಸಂಕಲ್ಪ ಹೊಂದಿ ಪರಿಣಾಮಕಾರಿಯಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ಸಲಹೆ ನೀಡಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ರಸಪ್ರಶ್ನೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಅತಿ ಕೆಟ್ಟ ವಸ್ತು. ಆದರೆ ತಕ್ಷಣಕ್ಕೆ ಇದರಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ. ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ, ತ್ಯಜಿಸಬೇಕಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಾ ಹೋದಂತೆಲ್ಲ ಸ್ವಚ್ಛತೆ ಕಡಿಮೆ ಆಗುತ್ತಾ ಬಂದಿದೆ. ಘನ ಮತ್ತು ಇತರೆ ತ್ಯಾಜ್ಯವಸ್ತುಗಳನ್ನು ಪರಿಣಾಮಕಾರಿಯಾಗಿ, ಪರಿಸರಕ್ಕೆ ಧಕ್ಕೆಯಾಗದಂತೆ ವಿಲೇವಾರಿ ಮಾಡಬೇಕಿದೆ ಎಂದು ಹೇಳಿದರು.

ADVERTISEMENT

ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಪ್ರಬುದ್ಧ ವಿದ್ಯಾರ್ಥಿಗಳಿಗೆ ತಿಳಿ ಹೇಳಿದಲ್ಲಿ ಅವರು ಸ್ವಚ್ಚತೆ ಕಾಪಾಡಿ, ಪರಿಸರ ಮಲಿನವಾಗದಂತೆ ತಡೆಯುವಲ್ಲಿ ಸಫಲರಾಗುತ್ತಾರೆ ಎಂದು ಆಶಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ, ‘ಇಂದಿನ ರಸಪ್ರಶ್ನೆಯಲ್ಲಿ ಪಡೆಯುವ ಮಾಹಿತಿಯನ್ನು ಪ್ರತಿ ವಿದ್ಯಾರ್ಥಿಗಳೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಈ ಕಾರ್ಯಕ್ರಮ ಸಫಲವಾಗುತ್ತದೆ. ಮಕ್ಕಳು ತಮ್ಮ ಪೋಷಕರಿಗೆ, ನೆರೆಹೊರೆಯವರಿಗೆ ಸ್ವಚ್ಛತೆ ಬಗ್ಗೆ ಹೇಳಬೇಕು. ಹಿಂದೆಲ್ಲ ಬಯಲು ಶೌಚಾಲಯ ಸಾಮಾನ್ಯವಾಗಿತ್ತು. ಆಗ ಹೆಣ್ಣುಮಕ್ಕಳು ಬಹಿರ್ದೆಸೆಗೆ ಹೋಗುವುದು ಕಷ್ಟಕರವಾಗಿತ್ತು. ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿತ್ತು’ ಎಂದರು.

ಎ.ವಿ.ಕಮಲಮ್ಮ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಪ್ರಕಾಶ್ ಪಿ.ಎಸ್., ‘ವಿದ್ಯಾರ್ಥಿಗಳು ಸೋಲನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುವ ಮತ್ತು ಗೆಲುವನ್ನು ಆಚರಣೆ ಮಾಡುವ ಗುಣವನ್ನು ಹೊಂದಿರಬೇಕು. ಎಲ್ಲ ಮಕ್ಕಳೂ ಭಿನ್ನ ಹಾಗೂ ಎಲ್ಲ ಮಕ್ಕಳಲ್ಲೂ ವಿಶೇಷವಾದ ಪ್ರತಿಭೆ ಇರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಹಾಗೂ ಹಿರಿಯರು ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಬೇಕು’ ಎಂದು ಕಿವಿಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಸಿ. ನಿರಂಜನ್, ‘ಸ್ವಚ್ಛ ಭಾರತ್ ಮಿಷನ್ ಯೋಜನೆಯು ದೇಶದ ಹೆಮ್ಮೆಯ ಮತ್ತು ಆಶಾದಾಯಕ ಯೋಜನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಈ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮೊದಲನೇ ಬಹುಮಾನ ಪಡೆದ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆ ಆಗಲಿದೆ’ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಕುಮಾರ್ ಹನುಮಂತಪ್ಪ ಸಾರಥಿ ವಂದಿಸಿದರು. ಕನ್ನಡ ಉಪನ್ಯಾಸಕಿ ಗೀತಾ ಎಂ.ಸಿ. ನಿರೂಪಿಸಿದರು. ಎ.ವಿ.ಕಮಲಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಶಿವಪ್ಪ ಜೆ., ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಬಸವರಾಜು ಮತ್ತು ರೂಪ ಸೇರಿ ಕಾಲೇಜು ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ರಸಪ್ರಶ್ನೆ ವಿಜೇತರು: ದೇವ ಆರ್‌., ನಂದನ್‌ ಪಿ.ಎಚ್‌., (ರಾಷ್ರೋತ್ಥಾನ ವಿದ್ಯಾಕೇಂದ್ರ ದಾವಣಗೆರೆ–ಪ್ರಥಮ ಸ್ಥಾನ), ಆಶೀಷ್‌, ಕರುಣಾಕರ (ಎಂ.ಕೆ.ಇ.ಟಿ. ಪ್ರೌಢಶಾಲೆ ಹರಿಹರ–ದ್ವಿತೀಯ ಸ್ಥಾನ), ಅಭಿನಂದನ್‌ ಕೆ., ಅವಿನಾಶ ಅಬ್ರಹಂ (ಸಿದ್ಧಗಂಗಾ ಪಿ.ಯು ಕಾಲೇಜು ದಾವಣಗೆರೆ–ತೃತೀಯ ಸ್ಥಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.