ADVERTISEMENT

ಚೇತರಿಕೆಯ ಹಾದಿಯಲ್ಲಿ ಕಟ್ಟಡ ನಿರ್ಮಾಣ

ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಚುರುಕು; ಕಾರ್ಮಿಕರಲ್ಲಿ ಮೂಡಿದ ಆಶಾಭಾವ

ಚಂದ್ರಶೇಖರ ಆರ್‌.
Published 30 ನವೆಂಬರ್ 2020, 13:15 IST
Last Updated 30 ನವೆಂಬರ್ 2020, 13:15 IST
ಜಿ. ಇಬ್ರಾಹಿಂ ಸಾಬ್‌
ಜಿ. ಇಬ್ರಾಹಿಂ ಸಾಬ್‌   

ದಾವಣಗೆರೆ: ಕೊರೊನಾ ಕಾರಣ ವಿಧಿಸಿದ್ದ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಕಟ್ಟಡ ನಿರ್ಮಾಣ ಉದ್ಯಮ ಚೇತರಿಕೆಯ ಹಾದಿಯಲ್ಲಿದೆ. ಲಾಕ್‌ಡೌನ್‌ ತೆರವಾದ ಬಳಿಕ ರಿಯಲ್‌ ಎಸ್ಟೇಟ್‌ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆ ಆರಂಭಗೊಂಡಿದ್ದು, ಕಾರ್ಮಿಕರು, ಗುತ್ತಿಗೆದಾರರು, ರಿಯಲ್ ಎಸ್ಟೇಟ್‌ ಏಜೆಂಟರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ಹಲವೆಡೆ ಜೂನ್‌ ತಿಂಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾಲ್‌, ವಾಣಿಜ್ಯ ಸಂಕೀರ್ಣಗಳ ಕಾಮಗಾರಿಗಳು ದೊಡ್ಡ ಮಟ್ಟದಲ್ಲಿ ಆರಂಭವಾಗದಿದ್ದರೂ ಮನೆ, ಕಚೇರಿ ಹಾಗೂ ಇತರೆ ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರಲ್ಲಿ ಆಶಾಭಾವ ಮೂಡಿದೆ.

ಜಿಲ್ಲೆಯ ದಾವಣಗೆರೆ ನಗರ ಹೊರತುಪಡಿಸಿದರೆ ಚನ್ನಗಿರಿ, ಸಂತೇಬೆನ್ನೂರು, ಮಲೇಬೆನ್ನೂರು, ಹೊನ್ನಾಳಿ, ಜಗಳೂರಿನಲ್ಲಿ ರಿಯಲ್‌ ಎಸ್ಟೇಟ್‌
ಉದ್ಯಮ ಮೊದಲಿನಿಂದಲೂ ಪ್ರಗತಿಯ ಹಾದಿಯಲ್ಲಿದೆ. ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಈ ಉದ್ಯಮ ಚಟುವಟಿಕೆ ಚೇತರಿಕೆ ಕಂಡಿರುವುದು ಸಮಾಧಾನದ ಸಂಗತಿ.

ADVERTISEMENT

ಒಂದೆಡೆ ಕೊರೊನಾ ಕಾರಣ ಎಲ್ಲ ವಸ್ತುಗಳ ಬೆಲೆ ಏರಿಕೆ ಕಟ್ಟಡ ನಿರ್ಮಾಣ ಉದ್ಯಮವನ್ನೂ ನಲುಗಿಸಿದೆ. ಮತ್ತೊಂದೆಡೆ ನಗರ ಪ್ರದೇಶಗಳಿಂದ ಊರಿಗೆ ಮರಳಿದ ಹಲವರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವುದು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆ.

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ ಊರಿಗೆ ಮರಳಿದ ಸ್ಥಿತಿವಂತರು ರಿಯಲ್‌ ಎಸ್ಟೇಟ್‌ನತ್ತ ಚಿತ್ತ ಹರಿಸಿರುವುದು ಗಮನಾರ್ಹ.

ಭೂಮಿ ಖರೀದಿಯಲ್ಲಿನ ಸರ್ಕಾರದ ನಿಯಮಗಳು, ಸಿಮೆಂಟ್‌, ಕಬ್ಬಿಣ, ಮರಳು, ಪೀಠೋಪಕರಣ ಸೇರಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮಾಲೀಕರು, ಗುತ್ತಿಗೆದಾರರನ್ನು ಹೈರಾಣಾಗಿಸಿದೆ. ಈ ಎಲ್ಲ ಸಂಕಷ್ಟಗಳ ನಡುವೆಯೂ ದಿನದಿಂದ ದಿನಕ್ಕೆ ಉದ್ಯಮ ಅಭಿವೃದ್ಧಿ ಕಾಣುತ್ತಿದೆ.

‘ಲಾಕ್‌ಡೌನ್ ಕಾರಣ ಕಟ್ಟಡ ನಿರ್ಮಾಣ ಉದ್ಯಮಸಂಪೂರ್ಣ ನಲುಗಿತ್ತು.
ಹಲವು ಕಾರ್ಮಿಕರು ಬಹಳ ತೊಂದರೆ ಅನುಭವಿಸಿದ್ದರು. ಹಲವರಿಗೆ ನೆರವು ನೀಡಿದ್ದೆವು. ಈಗ 4 ತಿಂಗಳಿನಿಂದ ಸುಧಾರಿಸಿದೆ. ನಗರಗಳಿಂದ ಊರಿಗೆ ಮರಳಿದವರು ಇದರತ್ತ ಮುಖ ಮಾಡಿರುವುದು ಪ್ರಗತಿಯ ಸಂಕೇತ. ನಿವೇಶನ ಖರೀದಿ ಮಾಡುತ್ತಿರುವುದು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಶುರು ಮಾಡಿರುವುದು ಉದ್ಯಮಕ್ಕೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ’ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ ಎಂಜಿನಿಯರ್‌ ಕರಿಬಸಯ್ಯ ವಿ.ಎಂ.

‘ಸದ್ಯ ಕೊರೊನಾ ಕಾರಣ ಬಹುತೇಕರು ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಎಲ್ಲ ಕ್ಷೇತ್ರಗಳು ಮೊದಲಿನಂತೆ ಸಹಜ ಸ್ಥಿತಿಗೆ ಬಂದರೆ ಕಟ್ಟಡ ನಿರ್ಮಾಣ ಉದ್ಯಮ ಇನ್ನೂ ಅಭಿವೃದ್ಧಿ
ಹೊಂದಲಿದೆ. ಇದರ ನಿರೀಕ್ಷೆಯಲ್ಲಿದ್ದೇವೆ.
ದಿನದಿಂದ ದಿನಕ್ಕೆ ಉದ್ಯಮ ಸುಧಾರಿಸುತ್ತಿದೆ’
ಎಂದು ಅವರು ಹೇಳಿದರು.

‘ಪ್ರತಿದಿನ 200ಕ್ಕೂ ಹೆಚ್ಚು ಜನರು ಲೇಔಟ್‌ಗಳನ್ನು ವೀಕ್ಷಿಸಲು ಬರುತ್ತಿದ್ದಾರೆ. ಲಾಕ್‌ಡೌನ್‌ಗಿಂತಲೂ ಮೊದಲು ಉತ್ತಮ ವಹಿವಾಟು ನಡೆಯುತ್ತಿತ್ತು. ಆಗಿನ ಬೂಮ್‌ ಈಗ ಇಲ್ಲ. ಕೊರೊನಾ ಕಾರಣ ಉದ್ಯಮದ ಮೇಲೆ ಶೇ 80ರಷ್ಟು ಹೊಡೆತ ಬಿದ್ದಿತ್ತು.ಈಗೀಗ ಕೊಂಚ ಸುಧಾರಣೆ ಕಾಣುತ್ತಿದೆ’ ಎಂದು ಎ.ಜೆ. ಬಿಲ್ಡರ್ಸ್‌ನ ಜಯಕುಮಾರ್‌ ಕೋಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

91 ಸಾವಿರ ಕಟ್ಟಡ ಕಾರ್ಮಿಕರಿಗೆ ಪರಿಹಾರ

ಜಿಲ್ಲೆಯಲ್ಲಿ 1,06,000 ಜನ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ಲಾಕ್‌ಡೌನ್‌ ಕಾರಣ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ₹ 5 ಸಾವಿರ ಪರಿಹಾರ ಬಹುತೇಕರಿಗೆ ದೊರೆತಿಲ್ಲ. ಕಟ್ಟಡ ಕಾರ್ಮಿಕರಲ್ಲದವರೂ ಪರಿಹಾರ ಪಡೆದಿದ್ದಾರೆ ಎಂಬುದು ಕಟ್ಟಡ ಕಾರ್ಮಿಕರ ಆರೋಪ.

‘ಜಿಲ್ಲೆಯಲ್ಲಿ 91 ಸಾವಿರ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಪರಿಹಾರ ನೀಡಲಾಗಿದೆ. ಲಾಕ್‌ಡೌನ್‌ಗಿಂತ ಮೊದಲು ನೋಂದಾಯಿಸಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಬಳಿಕ ನೋಂದಾಯಿಸಿಕೊಂಡವರಿಗೆ ನೀಡಿಲ್ಲ. ಲಾಕ್‌ಡೌನ್‌ ಪರಿಹಾರಕ್ಕಾಗಿ ಕಟ್ಟಡ ಕಾರ್ಮಿಕರು ಎಂದು ಹೊಸದಾಗಿ ನೋಂದಾಯಿಸಿಕೊಂಡವರು 20 ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಅಂತಹವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್‌.

‘ಕೆಲ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪರಿಹಾರ ದೊರೆಯದ ಕಾರಣ ಅಂತಹವರ ಪಟ್ಟಿ ಮಾಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಳುಹಿಸಲಾಗಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿರುವ ಕಾರಣ ಪರಿಹಾರ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಚಾರಣೆ ಬಳಿಕ ಪರಿಹಾರ ಬರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಕಟ್ಟಡ ಕಾರ್ಮಿಕರಲ್ಲದವರು ಹೆಸರು ನೋಂದಾಯಿಸಿಕೊಂಡು ಇಲಾಖೆಯ ಪ್ರಯೋಜನ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಾರ್ಮಿಕರಿಗೆ ಪೀಠೋಪಕರಣ ಕಿಟ್‌ ನೀಡಲು ಫಲಾನುಭವಿಗಳ ಪಟ್ಟಿ ಮಾಡಲಾಗಿದೆ. ಕಿಟ್‌ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಅರ್ಹರಿಗೆ ಅನ್ಯಾಯ: ಆರೋಪ

‘ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ 12 ಸಾವಿರ ಜನರಿಗೆ ಸರ್ಕಾರದ ₹ 5 ಸಾವಿರ ಪರಿಹಾರ ಬರಬೇಕಿದೆ. ಜಿಲ್ಲೆಯಲ್ಲಿ 70 ಸಾವಿರ ಕಟ್ಟಡ ಕಾರ್ಮಿಕರು ಇದ್ದಾರೆ. ಆದರೆ ಇಲಾಖೆಯಲ್ಲಿ ನೋಂದಾಯಿಸಿಕೊಂಡವರು 1.06 ಲಕ್ಷ ಜನ. ಚನ್ನಗಿರಿಯಂತಹ ಕೃಷಿ ಪ್ರಧಾನ ತಾಲ್ಲೂಕಿನಲ್ಲೇ 9 ಸಾವಿರಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಅನರ್ಹರೇ ಹೆಚ್ಚು. ಕಾರ್ಮಿಕ ಇಲಾಖೆಯಲ್ಲಿನ ಕೆಲ ನಿವೃತ್ತ ಸಿಬ್ಬಂದಿ ಅರ್ಹರಲ್ಲದವರಿಗೂ ಕಾರ್ಮಿಕರ ಕಾರ್ಡ್‌ ಮಾಡಿಕೊಡುತ್ತಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯ ಆಗುತ್ತಿದೆ’ ಎಂದು ಆರೋಪಿಸುತ್ತಾರೆರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ, ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ಉಮೇಶ್‌.

‘ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಗಾರೆ ಚೆಕ್ಕೆ, ಕರಣಿ ಸೇರಿ ಪೀಠೋಪಕರಣದ ಕಿಟ್‌ ನೀಡಲಾಗುತ್ತದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಅದನ್ನು ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ’ ಎಂದು ದೂರುತ್ತಾರೆ ಅವರು.

ಸೌಲಭ್ಯ ನೀಡುವಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಗರಿಗೆದರಿದ ರಿಯಲ್ ಎಸ್ಟೇಟ್ ವಹಿವಾಟು

ಚನ್ನಗಿರಿ: ಲಾಕ್‌ಡೌನ್‌ ಕಾರಣ ಏಳು ತಿಂಗಳು ಯಾವುದೇ ಕಾಮಗಾರಿಗಳು ನಡೆಯದಿದ್ದರಿಂದ ಕಟ್ಟಡ ನಿರ್ಮಾಣ ಉದ್ಯಮ ಸಂಕಷ್ಟದಲ್ಲಿತ್ತು.

ಮುಖ್ಯವಾಗಿ ರಿಯಲ್ ಎಸ್ಟೇಟ್ ವಹಿವಾಟು ನಿಂತಿದ್ದರಿಂದ ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದ ಜನರು ಕೆಲಸವಿಲ್ಲದೇ ಮನೆಗಳಲ್ಲಿ ಕಾಲ ಕಳೆಯುವಂತಾಗಿತ್ತು.

ಲಾಕ್‌ಡೌನ್‌ ತೆರವಾದ ಬಳಿಕ ನಿಧಾನವಾಗಿ ಮನೆಗಳ ನಿರ್ಮಾಣ ಕಾಮಗಾರಿಗಳು ಆರಂಭಗೊಂಡಿವೆ. ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಕೃಷಿ ಭೂಮಿಗಳನ್ನು ನಿವೇಶನಗಳನ್ನಾಗಿ ಮಾಡಲು ರೈತರು ಉತ್ಸುಕರಾಗಿ ಮುಂದೆ ಬರುತ್ತಿದ್ದಾರೆ. ಕೃಷಿ ಭೂಮಿಗೆ ಬಂಗಾರದ ಬೆಲೆ ಇದೆ. ಕೃಷಿ ಭೂಮಿಯನ್ನು ನಿವೇಶನವಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಿದರೆ ‌ಹೆಚ್ಚಿನ ಲಾಭ ಪಡೆಯಬಹುದು ಎಂಬ ಉದ್ದೇಶದಿಂದ ರೈತರು ಆ ಹಾದಿಯಲ್ಲಿ ಸಾಗುತ್ತಿದ್ದಾರೆ.

ಚನ್ನಗಿರಿ, ಸಂತೇಬೆನ್ನೂರು, ನಲ್ಲೂರು, ದೇವರಹಳ್ಳಿ, ಕಾಕನೂರು, ಅಜ್ಜಿಹಳ್ಳಿ, ಚಿಕ್ಕೂಲಿಕೆರೆ, ಗೊಲ್ಲರಹಳ್ಳಿ, ದೊಡ್ಡಬ್ಬಿಗೆರೆ, ತಾವರೆಕೆರೆ, ಹಿರೇಕೋಗಲೂರು, ತ್ಯಾವಣಿಗೆ, ಬಸವಾಪಟ್ಟಣ, ಕಬ್ಬಳ, ದೊಡ್ಡಘಟ್ಟ ಮುಂತಾದ ಗ್ರಾಮಗಳಲ್ಲಿ ಕೃಷಿ ಭೂಮಿಗಳನ್ನು ನಿವೇಶನಗಳನ್ನಾಗಿ ಮಾರ್ಪಾಡು ಮಾಡುವ ಕಾರ್ಯ ಭರದಿಂದ ಸಾಗಿದೆ. ಚನ್ನಗಿರಿ ಹಾಗೂ ಸಂತೇಬೆನ್ನೂರು ಗ್ರಾಮಗಳಲ್ಲಿ ನಿವೇಶನಗಳ ಮಾರಾಟವೂ ಜೋರಾಗಿ ನಡೆಯುತ್ತಿದೆ. ಇಲ್ಲಿ ನಿವೇಶನಗಳ ಬೆಲೆ ಹೆಚ್ಚಿದೆ.

‘ಕೃಷಿ ಭೂಮಿಗಳನ್ನು ನಿವೇಶನಗಳನ್ನಾಗಿ ಮಾರ್ಪಾಡು ಮಾಡಲು ರೈತರು ಪ್ರತಿದಿನ ಕಚೇರಿಗೆ ಬರುತ್ತಾರೆ. ಪ್ರತಿ ವರ್ಷ ತಾಲ್ಲೂಕಿನಲ್ಲಿ 100 ಎಕರೆಗಿಂತ ಹೆಚ್ಚು ಕೃಷಿ ಭೂಮಿಯನ್ನು ನಿವೇಶನಗಳಾಗಿ ಮಾರ್ಪಾಡು ಮಾಡಲಾಗುತ್ತಿದೆ’ ಎಂದು ತಹಶೀಲ್ದಾರ್ ಪಟ್ಟರಾಜಗೌಡ ಮಾಹಿತಿ ನೀಡಿದರು.

‘ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೆಲಸವಿಲ್ಲದ ಸಮಯದಲ್ಲಿ ಪಡಿತರ ಕಿಟ್‌ಗಳನ್ನು ಕಾರ್ಮಿಕರ ಮನೆ ಬಾಗಿಲಿಗೆ ಹಲವಾರು ಸಂಘ-ಸಂಸ್ಥೆಗಳು ವಿತರಣೆ ಮಾಡಿದ್ದವು. ಲಾಕ್‌ಡೌನ್‌ ನೆನೆಸಿಕೊಂಡರೆ ಭಯವಾಗುತ್ತದೆ‌’ ಎನ್ನುತ್ತಾರೆ ‌ಕಟ್ಟಡ ಕಾರ್ಮಿಕ‌ ಸೈಯದ್ ಅಬ್ಬಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.